ADVERTISEMENT

ನಿರ್ಲಕ್ಷ್ಯಕ್ಕೆ ಒಳಗಾದ ಇಬ್ಬರು ಮಹಾನ್ ಸಾಧಕರ ಸಮಾಧಿ

ಮುತ್ತುರಾಜ ಬಿ.ಹೆಬ್ಬಾಳ
Published 29 ಮೇ 2011, 12:25 IST
Last Updated 29 ಮೇ 2011, 12:25 IST

ಒಬ್ಬರು ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರಾದರೆ, ಇನ್ನೊಬ್ಬರು ದಾಸ ಶ್ರೇಷ್ಠರು. ಇಬ್ಬರೂ ಸಮಾಜದ ಉದ್ದಾರಕ್ಕಾಗಿ, ಜನಸಾಮಾನ್ಯರ ಹಿತಕ್ಕಾಗಿ ಬದುಕನ್ನು ಮುಡಿಪಾಗಿ ಇಟ್ಟವರು. ಜೀವಿತ ಕಾಲದಲ್ಲಿ ಸಾಮಾನ್ಯ ಜನರಿಂದಷ್ಟೇ ಅಲ್ಲ, ರಾಜ ಮಹಾರಾಜ ರಿಂದಲೂ ಗೌರವಕ್ಕೆ ಪಾತ್ರರಾದವರು. ಆದರೆ ಇಂದು ಅವರನ್ನು ನೆನಪಿಸಿ ಕೊಳ್ಳುವುದಿರಲಿ, ಅವರ ಸಮಾಧಿಗಳೂ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿವೆ.

ಅವು ಬೇರಾರದ್ದೂ ಅಲ್ಲ. ವಿಜಯ ನಗರ ಸಾಮ್ರಾಜ್ಯದಲ್ಲಿ ಪ್ರೌಢದೇವ ರಾಯನ ಆಸ್ಥಾನದಲ್ಲಿದ್ದ ಅದೃಶ್ಯ ಮಹಾಕವಿಯದ್ದಾದರೆ, ಇನ್ನೊಬ್ಬರು ಕಾಖಂಡಕಿಯ ಮಹಿಪತಿದಾಸರದ್ದು!

ಇಲ್ಲಿನ ಹಳೇ ಕೊಲ್ಹಾರದಲ್ಲಿ ದೇಸಾಯಿಯವರ ಹೊಲದಲ್ಲಿ ಅದೃಶ್ಯ ಮಹಾಕವಿಯ ಗದ್ದುಗೆ ಇದ್ದರೆ, ಮಹಿಪತಿದಾಸರ ವೃಂದಾವನ ಹಳೇನಾಕೆ ಎಂದು ಕರೆಯುವ ಅನಂತಶಯನ ದೇವಾಲಯದ ಪಕ್ಕದಲ್ಲಿದೆ. ಇಬ್ಬರೂ ಮಹಾತ್ಮರ ಸಮಾಧಿಗಳು ಈಗ ಕೃಷ್ಣಾರ್ಪಣ ಗೊಂಡಿದ್ದರೂ, ಹಿನ್ನೀರು ಸರಿದ ಪರಿಣಾಮ ನೋಡಲು ಕಾಣ ಸಿಗುತ್ತವೆ.

ಅದೃಶ್ಯಕವಿಯ ಸಮಾಧಿ ಆಕರ್ಷಣೀಯವಾದ ಕೆತ್ತನೆಗಳಿಂದ ಕೂಡಿದ್ದು, ವಿಶಾಲವಾಗಿದೆ. ಆದರೆ ಈಗ ಅದು ಕಳೆದ ಹತ್ತು ವರ್ಷಗಳಿಂದ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದ್ದರಿಂದ, ಸಮಾಧಿಯ ಕೆಳ ಭಾಗದಲ್ಲಿ ಕೆಸರು ತುಂಬಿಕೊಂಡಿದೆ. ನೀರಿನ ಅಲೆಗಳ ರಭಸವಾದ ಹೊಡೆತ ತಿಂದು ಸೂಕ್ಷ್ಮ ಕೆತ್ತನೆಯ ಚಿತ್ರಗಳು ಮುಕ್ಕಾಗುತ್ತಿವೆ. ಮಹಿಪತಿದಾಸರ ವೃಂದಾವನವಂತೂ ಸಂಪೂರ್ಣ ಹಾಳಾಗಿ ಉರುಳಿ ಬಿದ್ದಿದ್ದು, ಪಾದುಕೆ ಗಳು, ಮೂರ್ತಿಗಳು ಅಲ್ಲಲ್ಲಿ ಚದುರಿ ಹೋಗಿವೆ.

ಸಂಕ್ಷಿಪ್ತ ಪರಿಚಯ: ಅದೃಶ್ಯ ಮಹಾ ಕವಿಯ ತವರೂರು ಕೆನೆ ಮೊಸರಿನ ಖ್ಯಾತಿಯ ಕೊಲ್ಹಾರ. ಈತನು ವಿಜಯನಗರದ ಅರಸ ಪ್ರೌಢದೇವ ರಾಯ (1424-1446) ನ ಕುರಿತು ರಚಿಸಿದ ಕೃತಿ `ಪ್ರೌಢದೇವರಾಯ~ ಮಹಾಕಾವ್ಯ. ಇದು ಪ್ರೌಢದೇವ ರಾಯನ ಜೀವನ, ಸಾಧನೆಗಳ ಕುರಿತು ತಿಳಿಸುವ ಕೃತಿಯಾದ ಕಾರಣ ಅದೃಶ್ಯ ಕವಿಯ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.

ವಿಜಯನಗರದ ಅರಸರಿಂದ ಅದೃಶ್ಯ ಕವಿಗೆ ಕೊಲ್ಹಾರ ಗ್ರಾಮ ಉಂಬಳಿಯಾಗಿ ದೊರೆಕಿದ ಬಗ್ಗೆ ಉಲ್ಲೇಖವಿದೆ. ಕೊಲ್ಹಾರದ ದೇಸಾಯಿ ಮನೆತನದ ಮೂಲ ಪುರುಷನಾಗಿರುವ ಅದೃಶ್ಯ ಕವಿಯು, ಎಲೆ ಮರೆಯ ಕಾಯಿಯಂತೆ ಅದೃಶ್ಯನಾಗಿ ಆತನ ಗದ್ದುಗೆ ಎಲ್ಲರಿಂದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ಮಹಿಪತಿದಾಸರು (1611- 1681) ಆಧ್ಯಾತ್ಮ ಸಿದ್ಧ ಮುಕುಟ ಮಣಿಯಾಗಿ ಬೆಳಗಿ ಇಡೀ ಮಾನವತೆ ಗಾಗಿ ತಮ್ಮ ಉದಾತ್ತ ಜೀವನ, ಸಾಹಿತ್ಯಗಳ ಮೂಲಕ ದಿವ್ಯ ಸಂದೇಶ ನೀಡಿದವರು.

ವಿಜಾಪುರದ ಆದಿಲ್‌ಶಾಹಿ ರಾಜನ ಆಸ್ಥಾನದಲ್ಲಿ ದಿವಾನರಾಗಿದ್ದವರು. ಮುಂದೆ ದಾಸ ದೀಕ್ಷೆ ಪಡೆದು ಕಾಖಂಡಕಿ ಹರಿದಾಸರೆಂದು ಪ್ರಸಿದ್ಧ ರಾದರು. ಶಾನುಂಗಾ- ಶಾನುಂಗಿ ಎಂಬ ಇಸ್ಲಾಂ ಧರ್ಮ ವಿರಕ್ತರ ಮಾರ್ಗ ದರ್ಶನದಲ್ಲಿ ಆಧ್ಯಾತ್ಮ ಸಾಧನೆಗೈದು, ಅನೇಕ ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರಿಮಂತಗೊಳಿಸಿದವರು.
 
ತಮ್ಮ ಜೀವಿತದ ಕೊನೆಯ ದಿನಗಳನ್ನು ಕೊಲ್ಹಾರದ ಕೃಷ್ಣಾ ನದಿಯ ತೀರದಲ್ಲಿ ಕಳೆದು, ಛಟ್ಟಿ ಅಮಾವಾಸ್ಯೆ ಯಂದು ದೇಹ ತ್ಯಾಗ ಮಾಡಿದರು. ಇಂದಿಗೂ ಕೊಲ್ಹಾರ ಸುತ್ತಮುತ್ತಲ ಭಾಗದಲ್ಲಿ ಛಟ್ಟಿ ಅಮಾವಾಸ್ಯೆಯಂದು ಮಹಿಪತಿ ದಾಸರ ಆರಾಧನೆ ವಿಜೃಂಭಣೆಯಿಂದ ನಡೆಯುತ್ತದೆ.

ಸ್ಮಾರಕಗಳಾಗಲಿ: ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ಮರೆಯಾಗುತ್ತಿ ರುವ ಅದೃಶ್ಯಕವಿಯ ಗದ್ದುಗೆ ಹಾಗೂ ಮಹಿಪತಿದಾಸರ ವೃಂದಾವನಗಳನ್ನು ಸ್ಥಳಾಂತರಿಸಿ ಸ್ಮಾರಕಗಳನ್ನಾಗಿ ಅಭಿವೃದ್ದಿ ಪಡಿಸಬೇಕಾಗಿದೆ.

ಇಲ್ಲಿಗೆ ಸಮೀಪದ ಆಲಮಟ್ಟಿಯಲ್ಲಿ ಮಂಜಪ್ಪ ಹರ್ಡೇಕರ ಅವರ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ಮಾಡಲು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭ ವಾದ ಮಾದರಿಯಲ್ಲಿ, ಇವರಿಬ್ಬರ ಐಕ್ಯ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರೆ ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸಿದಂತಾಗುತ್ತದೆ ಎಂಬುದು ಸಾರ್ವಜನಿಕರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.