ADVERTISEMENT

ನೀರಿಗಾಗಿ ಮುಂದುವರಿದ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 5:10 IST
Last Updated 21 ಮಾರ್ಚ್ 2012, 5:10 IST
ನೀರಿಗಾಗಿ ಮುಂದುವರಿದ ಸತ್ಯಾಗ್ರಹ
ನೀರಿಗಾಗಿ ಮುಂದುವರಿದ ಸತ್ಯಾಗ್ರಹ   

ವಿಜಾಪುರ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ತಾಲ್ಲೂಕಿನ ಶಿವಣಗಿ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.ಮಂಗಳವಾರ ಧರಣಿಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ, ಬರ ಪೀಡಿತ ಜಿಲ್ಲೆ ಎಂದು ಘೋಷಿಸಿದ್ದರೂ ಬರ ಪರಿಹಾರ ಕಾಮಗಾರಿ ಆರಂಭಗೊಂಡಿಲ್ಲ. ವಿಜಾಪುರ ಪಕ್ಕವೇ ಇರುವ ಈ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ ಎಂದರು.

ಚುನಾವಣೆಯ ಸಮಯದಲ್ಲಿ ಆಶ್ವಾಸನೆ ನೀಡಿ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಜನತೆಯ ಗೋಳಾಟ ವನ್ನೇ ಕಿರಿಕಿರಿ ಎಂದು ಭಾವಿಸಿ ಬೆಂಗಳೂರಿನ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ರಾಜು ಆಲಗೂರ ಮಾತನಾಡಿ, ರಾಜ್ಯದಲ್ಲಿ ಈಗ ಸಾಂವಿ ಧಾನಿಕ ಬಿಟ್ಟಕ್ಕು ಉಂಟಾಗಿದೆ. ಅರಾಜಕತೆ ತಾಂಡ ವಾಡುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿದರೆ ಕುಡಿಯುವ ನೀರು ಮಾತ್ರ ಅಲ್ಲ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬರುತ್ತದೆ ಎಂದರು.

ಶಿವಣಗಿ ಗ್ರಾಮಕ್ಕೆ 2006-07ನೇ ಸಾಲಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿತ್ತು. ಇನ್ನೂವರೆಗೂ ಅದು ಅನುಷ್ಠಾನಕ್ಕೆ ಬಾರದಿರುವುದು ಖಂಡನೀಯ. ಅದನ್ನು ಕೂಡಲೇ ಜಾರಿಗೊಳಿಸಿ ಗ್ರಾಮಸ್ಥರ ನೀರಿನ ಬವಣೆ ತಪ್ಪಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡರಾದ ದಾನಪ್ಪ ಕಟ್ಟಿಮನಿ, ರಾಜಪಾಲ ಚವ್ಯಾಣ, ಶಿವಣಗಿ ಗ್ರಾ.ಪಂ. ಸದಸ್ಯರು, ಗಣ್ಯರು ಹಾಗೂ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.