ADVERTISEMENT

ನೀರಿನ ಸಮಸ್ಯೆ: ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:25 IST
Last Updated 18 ಅಕ್ಟೋಬರ್ 2012, 8:25 IST

ವಿಜಾಪುರ: ನಗರಸಭೆ ಹತ್ತಿರ ಹಾಗೂ ಸರ್ಕಾರಿ ಪ್ರೌಢ ಶಾಲೆಯ ಕಂಪೌಂಡ್ ಸುತ್ತ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಹಂಚಿಕೆಯ ತನಿಖೆ. ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗಡುವು. ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿಸಿ ರಾಜೀನಾಮೆ ಪತ್ರ ನೀಡಿ ಹೊರಹೋದ ಕಾಂಗ್ರೆಸ್ ಸದಸ್ಯ. ನಗರೋತ್ಥಾನ ಕಾಮಗಾರಿ ವಿಳಂಬಕ್ಕೆ ಆಕ್ರೋಶ...

ಬುಧವಾರ ಇಲ್ಲಿ ನಡೆದ ವಿಜಾಪುರ ನಗರಸಭೆಯ ಸಾಮಾನ್ಯ ಸಭೆಯ ಪ್ರಮುಖ ಅಂಶಗಳಿವು.
`ವಿಜಾಪುರ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಿದೆ. 10-15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸದಿದ್ದರೂ ದುಪ್ಪಟ್ಟು ದರ ವಸೂಲಿ ಮಾಡಲಾಗುತ್ತಿದೆ~ ಎಂದು ಸದಸ್ಯರಾದ ಎ.ಎ. ಹೊರ್ತಿ, ರವಿ ಕುಲಕರ್ಣಿ, ರವಿಕಾಂತ ಬಗಲಿ ಮತ್ತಿತರರು ಆರೋಪಿಸಿದರು.

ಮಾಹಿತಿ ನೀಡಬೇಕಿದ್ದ ಜಲಮಂಡಳಿಯ ಹಿರಿಯ ಅಧಿಕಾರಿಗಳು ಸಭೆಗೆ ಗೈರು ಉಳಿದಿದ್ದರು. ಈ ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಭೆ ಕರೆಯುವುದಾಗಿ ಪೌರಾಯುಕ್ತರ ಪ್ರಭಾರ ಹುದ್ದೆ ವಹಿಸಿಕೊಂಡಿರುವ ಉಪ ವಿಭಾಗಾಧಿಕಾರಿ ಡಾ.ಬೂದೆಪ್ಪ ಭರವಸೆ ನೀಡಿದರು.

ಕ್ರಿಮಿನಲ್ ಮೊಕದ್ದವೆು
ನಗರದಲ್ಲಿ ಕೆಲವೆಡೆ ಕೈಗೊಂಡಿರುವ ರಸ್ತೆ ಕಾಮಗಾರಿ ಕಳಪೆ ಮಟ್ಟದ್ದಾಗಿವೆ ಎಂದು ಸದಸ್ಯರು ದೂರಿದಾಗ, `ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದವೆು ದಾಖಲಿಸಲಾಗುವುದು~ ಎಂದು ಡಾ.ಬೂದೆಪ್ಪ ಹೇಳಿದರು.

ತನಿಖೆ: `ನಗರಸಭೆಯ ಹತ್ತಿರ ಹಾಗೂ ಗಾಂಧಿ ಚೌಕ್ ಬಳಿಯ ಸರ್ಕಾರಿ ಪ್ರೌಢಶಾಲೆಯ ಕಂಪೌಂಡ್ ಸುತ್ತಲೂ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಶಾಸಕರು ಹೇಳಿದವರಿಗೆ ಕಾನೂನು ಬಾಹಿರವಾಗಿ ಹಂಚಿಕೆ ಮಾಡಲಾಗಿದೆ. ಈ ಹಂಚಿಕೆ ರದ್ದುಪಡಿಸಬೇಕು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಇಲ್ಲವೆ ಟೆಂಡರ್ ಹೊಸದಾಗಿ ಹಂಚಿಕೆ ಮಾಡಬೇಕು~ಎಂದು ಬಿಜೆಪಿ ಸದಸ್ಯ ರಾಜೇಶ ದೇವಗಿರಿ ಆಗ್ರಹಿಸಿದರು.

`ಈ ಮಳಿಗೆಗಳ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ. ನಾವು ನಾಲ್ಕು ಜನ ಸದಸ್ಯರ ಸೇರಿ ಪತ್ರ ನೀಡಿದರೂ ಪೌರಾಯುಕ್ತರು ಸಮಗ್ರ ಮಾಹಿತಿ ನೀಡಿಲ್ಲ. ತನಿಖೆಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ತನಿಖೆ ನಡೆಸಿ~ ಎಂದು ರವಿ ಬಗಲಿ ಒತ್ತಾಯಿಸಿದರು.

`ಜಿಲ್ಲಾಧಿಕಾರಿಗಳಿಂದ ಪತ್ರ ಬಂದಿದೆ. ತನಿಖೆಗೆ ನಡೆಸಿ ಕಾನೂನು ಉಲ್ಲಂಘನೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು~ ಎಂದು ಬೂದೆಪ್ಪ ಹೇಳಿದರು.

ಪ್ರತಿ ವರ್ಷ ತಲಾ 33 ರಂತೆ ಒಟ್ಟಾರೆ 100 ಕೋಟಿ ಅನುದಾನದ ನಗರೋತ್ಥಾನ ಯೋಜನೆಗೆ ಮಂಜೂರಾತಿ ದೊರೆತು ಎರಡು ವರ್ಷವಾಗಿದೆ. ಪ್ರಸ್ತಾವ ಸಲ್ಲಿಸುವಲ್ಲಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದ ಈ ಯೋಜನೆ ಜಾರಿ ವಿಳಂಬವಾಗಿದೆ ಎಂದ ವಿಜು ಮಂಗಳವೇಡೆ ಇತರರು ದೂರಿದರು.

`ಈ ಯೋಜನೆ ಅಡಿಯಲ್ಲಿ ರೂ. 50 ಕೋಟಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ನಗರಸಭೆ ಕಟ್ಟಡಕ್ಕೆ ರೂ. 8 ಕೋಟಿ, ಮಾಸ್ಟರ್ ಪ್ಲಾನ್ ಜಾರಿ, ರಸ್ತೆಗಳ ಅಗಲೀಕರಣ ಮತ್ತು ಸೌಂದರೀ ಕರಣಕ್ಕೆ ಉಳಿದ ಹಣ ಮೀಸಲಿಡಲಾಗಿದೆ~ ಎಂದು ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೇರಲಗಿ ಮಾಹಿತಿ ನೀಡಿದರು.

ರಾಜೀನಾಮೆ
`ಇಬ್ಬರು ಬಿಜೆಪಿ ಶಾಸಕರಿದ್ದರೂ ವಿಜಾಪುರ ನಗರದ ಅಭಿವೃದ್ಧಿ ಆಗುತ್ತಿಲ್ಲ. ಬಿಜೆಪಿಯವರು ಕೆಲಸ ಮಾಡುತ್ತಿಲ್ಲ. ನಾನು ರಾಜೀನಾವೆು ನೀಡುತ್ತೇನೆ~ ಎಂದು ಹೇಳಿದ ಕಾಂಗ್ರೆಸ್ ಸದಸ್ಯ ಎ.ಎ. ಹೊರ್ತಿ ತಮ್ಮ ರಾಜೀನಾವೆು ಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿ ಸಭೆಯಿಂದ ಹೊರನಡೆದರು.

ಅಧ್ಯಕ್ಷ ಪರಶುರಾಮ ರಜಪೂತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಿಠ್ಠಲ ಕಟಕಧೋಂಡ, ಉಪಾಧ್ಯಕ್ಷ ಚನ್ನಪ್ಪ ಬಜಂತ್ರಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.