ADVERTISEMENT

ನೀರು-ಮೇವು ಪೂರೈಕೆಗೆ ಪ್ರಥಮ ಆದ್ಯತೆ: ನಿರಾಣಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 5:40 IST
Last Updated 12 ಜನವರಿ 2012, 5:40 IST

ವಿಜಾಪುರ: `ನೀರು-ಮೇವು ಪೂರೈಕೆ ಸರ್ಕಾರದ ಮೊದಲ ಆದ್ಯತೆಯಾಗಿದೆ. ಜಿಲ್ಲೆಯ ಯಾವುದೇ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಧಿಕಾರಿಗಳು ಅವಶ್ಯವಿರುವ ಕ್ರಮ ಕೈಗೊಳ್ಳಬೇಕು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಸೂಚಿಸಿದರು.

ಬುಧವಾರ ಇಲ್ಲಿ ಜಿಲ್ಲೆಯ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, `ಸಣ್ಣ ಪುಟ್ಟ ಕೆಲಸಗಳಿಗೆ ಅನುಮತಿ ಗಾಗಿ ಕಾಯುವುದು ಬೇಡ. ದರ ಪರಿಷ್ಕರಿಸಿ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಅಗತ್ಯವಿರುವೆಡೆ ಗೋಶಾಲೆಗಳನ್ನು ಆರಂಭಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಬೇಕು~ ಎಂದು ಆದೇಶಿಸಿದರು.

`ಬರ ಪರಿಹಾರ ಕಾಮಗಾರಿಗೆ ಟೆಂಡರ್ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಶಾಸಕರ ನೇತೃತ್ವದ ಕಾರ್ಯಪಡೆಯ ಸಭೆಯಲ್ಲಿ ಅನುಮೋದನೆ ದೊರೆತರೆ ಆ ಯೋಜನೆಗೆ ಸರ್ಕಾರದ ಎಲ್ಲ ಇಲಾಖೆಗಳಿಂದ ಅನುಮೋದನೆ ದೊರೆತಂತೆ. ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸೂಚಿಸಿದರು.

ಎರಡು ವರ್ಷಗಳ ಹಿಂದೆ ಕೊರೆದ ಕೊಳವೆ ಬಾವಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ವಿಷಯ ಚರ್ಚೆಗೆ ಬಂತು. ಈ ಯೋಜನೆಗಳ ಬಗ್ಗೆ ತಮ್ಮಲ್ಲಿ ನೋಂದಣಿಯೇ ಇಲ್ಲ ಎಂದು ಹೆಸ್ಕಾಂನವರು, ನೋಂದಣಿ ಮಾಡಿಸಿ ಹಣವನ್ನೂ ಪಾವತಿಸಿದ್ದೇವೆ ಎಂದು ತಾ.ಪಂ. ಅಧಿಕಾರಿಗಳು ವಿಭಿನ್ನ ಹೇಳಿಕೆ ನೀಡಿ ಅಚ್ಚರಿ ವ್ಯಕ್ತಪಡಿಸಿದರು.

ಗದ್ಯಾಳ ವಸ್ತು, ಹಾವಿನಾಳ, ಹತ್ತಳ್ಳಿಯಲ್ಲಿ 6 ವರ್ಷವಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಶಾಸಕ ವಿಠ್ಠಲ ಕಟಕಧೋಂಡ, ಜಿ.ಪಂ. ಉಪಾಧ್ಯಕ್ಷ ಶ್ರೀಶೈಲ ಪಾಟೀಲ ದೂರಿದರು. ಹಣ ಪಾವತಿಸಿದ್ದರೂ 160 ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬಾಕಿ ಇದೆ ಎಂದು ಜಿ.ಪಂ. ಸದಸ್ಯ ಶಿವಾನಂದ ಅವಟಿ ಹೇಳಿದರು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದೇವರ ಹಿಪ್ಪರಗಿ ನೀರಿನ ಸಮಸ್ಯೆ ನಿವಾರಿಸಲು 37 ಲಕ್ಷ ರೂಪಾಯಿ ಯೋಜನೆಗೆ ಅನುಮೋದನೆ ನೀಡಬೇಕು ಎಂಬ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮನವಿಗೆ, `ಆ ಜಲ ಮೂಲ ಬತ್ತುತ್ತಿದೆ. ಈ ಯೋಜನೆ ಪ್ರಯೋಜನಕಾರಿ ಅಲ್ಲ~ ಎಂದು ಅಧಿಕಾರಿಗಳು ಹೇಳಿದರು. ಪರ್ಯಾಯ ಯೋಜನೆ ರೂಪಿಸುವಂತೆ ಸಚಿವರು ಸೂಚಿಸಿದರು.

`ಬಹುಹಳ್ಳಿಗಳ ಕುಡಿಯುವ ನೀರು ಪೂರೈಕೆ ಯೋಜನಾ ವರದಿಯಲ್ಲಿ ಲೋಪಗಳಿವೆ. ಬಹುತೇಕ ಯೋಜನೆಗಳಲ್ಲಿ ಸನಿಹದ ಗ್ರಾಮಗಳು ಕೈಬಿಟ್ಟು ಹೋಗಿವೆ~ ಎಂದು ಶಾಸಕ ಎಂ.ಬಿ. ಪಾಟೀಲ ದೂರಿದರು.

ಇಂಡಿ ಮತ್ತು ಸಿಂದಗಿಯ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಲವು ಬಾರಿ ದೂರು ನೀಡಿದರೂ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಂಡಿ ಶಾಸಕ ಡಾ.ಎಸ್.ಎಸ್. ಬಗಲಿ ನೇರ ಆರೋಪ ಮಾಡಿದರು. ಈ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಾಗಿ ಸಚಿವರು ಭರವಸೆ ನೀಡಿದರು.

`ಮೇವನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು. ಇಲ್ಲವೆ ಮೇವು ಖರೀದಿಗೆ ರೈತರಿಗೆ ಸರ್ಕಾರ ನೆರವು ನೀಡಬೇಕು~ ಎಂದು ಇಂಡಿ ಶಾಸಕ ಡಾ.ಎಸ್.ಎಸ್. ಬಗಲಿ ಸಲಹೆ ನೀಡಿದರು.

ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಗೆ ಒಟ್ಟಾರೆ 12 ಕೋಟಿ ಬೇಡಿಕೆ ಇದ್ದು, ಈಗ 4 ಕೋಟಿ ಹಣವಿದೆ. ಉಳಿದ 8 ಕೋಟಿ ರೂಪಾಯಿ ಬಿಡುಗಡೆ ಮಾಡಿಸುವುದಾಗಿ ಸಚಿವ ನಿರಾಣಿ ಭರವಸೆ ನೀಡಿದರು.

12 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯುಕೆಪಿ-3ನೇ ಹಂತದ 17 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿರುವುದು ಐತಿಹಾಸಿಕ ನಿರ್ಣಯ. ಇದು ಹಾಗೂ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 900 ಕೋಟಿ ರೂಪಾಯಿ ವೆಚ್ಚದ ಯೋಜನೆ ರಾಜ್ಯ ಸರ್ಕಾರ ಜಿಲ್ಲೆಗೆ ನೀಡಿದ ಕೊಡುಗೆ ಎಂದರು.

ಜಿ.ಪಂ. ಅಧ್ಯಕ್ಷೆ ಶಂಕ್ರುಬಾಯಿ ಚಲವಾದಿ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಜಿ.ಪಂ. ಸಿಇಒ ಎ.ಎನ್. ಪಾಟೀಲ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.