ADVERTISEMENT

ಪಿಂಚಣಿ ಇಲ್ಲವೇ ಮೇವು ಕೊಡಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:10 IST
Last Updated 20 ಜನವರಿ 2011, 9:10 IST

ಬಿಜಾಪುರ: ಪಿಂಚಣಿಯೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಯೋವೃದ್ಧರು ಬುಧವಾರ ಇಲ್ಲಿ ಬಾಯಲ್ಲಿ ಮೇವು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಾಪುರ ನಗರ ಸ್ಲಂ ವಯೋವೃದ್ಧರ ಸಂಘಗಳ ಒಕ್ಕೂಟ, ವಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ, ವಿಜಾಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಪಂಚಾಯಿತಿ ಮುಖ್ಯದ್ವಾರದಿಂದ ತಹಸೀಲ್ದಾರ ಕಚೇರಿವರೆಗೆ ಬಾಯಲ್ಲಿ ಮೇವು ಇಟ್ಟುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಹಸೀಲ್ದಾರ ಕಚೇರಿ ಆವರಣದಲ್ಲಿ ನಡೆದ ಧರಣಿ ಸಂದರ್ಭದಲ್ಲಿ ಮಾತನಾಡಿದ ಅಕ್ರಂ ಮಾಶ್ಯಾಳಕರ, ವಿವಿಧ ಮಾಸಿಕ ಪಿಂಚಣಿಗಾಗಿ 2007ರಿಂದ ಅರ್ಜಿ ಸಲ್ಲಿಸುತ್ತಿದ್ದರೂ ಇಲ್ಲಿಯವರೆಗೆ ಮಂಜೂರಾಗಿಲ್ಲ. ಆದರೆ, ಲಂಚ ಕೊಟ್ಟರೆ ಕೇವಲ ಮೂರು ತಿಂಗಳಲ್ಲಿ ಆದೇಶ ಪ್ರತಿ ಕೊಡುತ್ತಿದ್ದಾರೆ ಎಂದು ದೂರಿದರು.‘ಪಿಂಚಣಿ ಕೊಡಿ ಇಲ್ಲವೆ ತಿನ್ನಲು ಮೇವು ಕೊಡಿ’ ಎಂದು ಕೇಳಲು ಈ ವಿನೂತನ ಪ್ರತಿಭಟನೆ ನಡೆಸಿದ್ದಾಗಿ ಹೇಳಿದರು.

ವಯೋವೃದ್ಧರ ಒಕ್ಕೂಟದ ಅಧ್ಯಕ್ಷ ಆನಂದ ಮಿರ್ಜಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ವೃದ್ಧರು, ಅಂಗವಿಕಲರು, ವಿಧವೆಯರಿಗೆ ಮಾಸಾಶನ ಆದೇಶ ಪ್ರತಿ ನೀಡುವವರೆಗೂ ಕದಲುವುದಿಲ್ಲ ಎಂದರು.ಧರಣಿ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಸುರೇಶ ಜಿರ್ಲಿ, ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಆದೇಶ ಪ್ರತಿ ನೀಡುವುದಾಗಿ ಭರವಸೆ ನೀಡಿದರು.

ಬ್ರದರ್ ಪ್ರಶಾಂತ, ಅಬ್ದುಲ್ ರಜಾಕ ತುರ್ಕಿ, ಶಿವಪ್ಪ ಘಂಟಿ, ಮುನ್ನಾ ಪಟೇಲ್, ಸರಿತಾ ಅಡಕಿ, ಮಾಬುಬಿ, ಹಣಮಂತ ಬಿರಾದಾರ, ಶ್ರೀಶೈಲ ಬಾಗಾಯತ, ಗಂಗೂರ, ಫಾತಿಮಾ ಪಾಂಡುಗೋಳ, ಗುರಪ್ಪ, ಕೃಷ್ಣ, ಹಾಜಿಲಾಲ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.