ADVERTISEMENT

ಪಿಜಿ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು

ಗಣೇಶ ಚಂದನಶಿವ
Published 19 ಜೂನ್ 2011, 9:00 IST
Last Updated 19 ಜೂನ್ 2011, 9:00 IST

ವಿಜಾಪುರ: ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿನಿಯರಿಗೆಲ್ಲ ಸರ್ಕಾರ ವಿಶೇಷ ಶಿಷ್ಯವೇತನ ನೀಡುವ ಅಗತ್ಯವಿದೆಯೇ? ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಸಂಕಷ್ಟಗಳಾದರೂ ಏನು...? ಎಂಬಿತ್ಯಾದಿ ಅಂಶಗಳ ಬಗ್ಗೆ ಚಿಂತನೆ ನಡೆಸುವಂತೆ ಮಾಡಿದ್ದು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸಂವಾದ.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಸಿ. ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಅವರು ಜಂಟಿಯಾಗಿ ಈ ಸಂವಾದ ಹಮ್ಮಿಕೊಂಡಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆ ಇಡೀ ಸಂವಾದದ ದಿಕ್ಕನ್ನೇ ಬದಲಿಸಿ, ಎಲ್ಲರನ್ನೂ ಚಿಂತನೆಗೆ ನೂಕಿತು.
ಆ ವಿದ್ಯಾರ್ಥಿನಿಯ ಪ್ರಶ್ನೆ ಹೀಗಿತ್ತು.

`ಮೇಡಂ, ನಮ್ಮ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕಲಿಯುವವರೆಲ್ಲ ಬಡವರು. ನಾವೆಲ್ಲ ಗ್ರಾಮೀಣ ಪ್ರದೇಶದಿಂದ ಬಂದಿದ್ದೇವೆ. ಮನೆಯಲ್ಲಿ ಬಡತನ, ಆರ್ಥಿಕ ಸಂಕಷ್ಟ. ಉನ್ನತ ಶಿಕ್ಷಣ ಪಡೆಯುತ್ತಿರುವ ನಮಗೆಲ್ಲ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲವೇ...?~

*****
ತಾನೂ ಒಂದು ಪ್ರಶ್ನೆ ಕೇಳಬೇಕು ಎಂದು ಕಾಟಾಚಾರಕ್ಕೆ ಕೇಳಿದ ಪ್ರಶ್ನೆ ಅದಾಗಿರಲಿಲ್ಲ. ಅದು ಆಕೆಯೊಬ್ಬಳ ಸಮಸ್ಯೆಯೂ ಅಲ್ಲ. ಬಡತನ ಬೇಗೆಯಲ್ಲಿರುವ, ಆರ್ಥಿಕ ಮುಗ್ಗಟ್ಟಿನಿಂದ ಬಳಲಿರುವ ಗ್ರಾಮೀಣ ಬಡ ವಿದ್ಯಾರ್ಥಿನಿಯರ ಬದುಕಿನ ತೊಳಲಾಟವೂ ಆಗಿತ್ತು.

`ನನಗೆ ಸಾಲ ಕೊಡಿ, ಬಡ್ಡಿ ಬಿಡಿ ಎಂದು ಕೇಳಬೇಡಿ. ಮಹಿಳಾ ಸಂರಕ್ಷಣೆ ಹಾಗೂ ಸಮಸ್ಯೆ ಪರಿಹಾರವಷ್ಟೇ ನನ್ನ ಕೆಲಸ~ ಎಂದು ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ `ಬ್ಯಾಂಕ್‌ಗಳಲ್ಲಿ ಶಿಕ್ಷಣ ಸಾಲ ಸಿಗುತ್ತೆ, ಪಡೆದುಕೊಳ್ಳಿ~ ಎಂದು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ತಕ್ಷಣಕ್ಕೆ ಹೇಳಿ ವಿಷಯಾಂತರಕ್ಕೆ ಯತ್ನಿಸಿದರು. ಆದರೆ, ಅಲ್ಲಿದ್ದವರು ಬಿಡಲಿಲ್ಲ.

ಪ್ರಶ್ನೆಗಳ ತೀವ್ರತೆ ಹೆಚ್ಚುತ್ತಿದ್ದಂತೆ ಸಮಸ್ಯೆಯ ಆಳ ಅರಿತ ಆ ಇಬ್ಬರು `ಮಹಿಳೆ~ಯರೂ ಮಮ್ಮಲ ಮರುಗಿದು. `ಹೌದಲ್ವೇ? ಇಲ್ಲಿ ಇಷ್ಟೊಂದು ಸಮಸ್ಯೆ ಇದೆ. ಇದಕ್ಕೆ ಖಂಡಿವಾಗಿಯೂ ಪರಿಹಾರ ಕಂಡುಕೊಳ್ಳಲೇಬೇಕಿದೆ~ ಎಂಬ ನಿರ್ಧಾರಕ್ಕೆ ಬಂದರು. ಅಲ್ಲಿ ನಡೆದ ಸಂವಾದದ ಸಾರ ಹೀಗಿದೆ.

ಪ್ರಶ್ನೆ: ಮಹಿಳಾ ವಿವಿ ವಿದ್ಯಾರ್ಥಿನಿಯರಿಗೆ ನಿಮ್ಮಿಂದ ನೆರವು ನೀಡಲು ಸಾಧ್ಯವೇ?
ಮಂಜುಳಾ: ಇಲ್ಲ. ಮಹಿಳಾ ಆಯೋಗದಿಂದ ನೇರವಾಗಿ ಆರ್ಥಿಕ ನೆರವು ನೀಡುವುದಿಲ್ಲ. ಅದನ್ನು ಸರ್ಕಾರ ಮಾಡಬೇಕು. ಮಹಿಳಾ ಶೋಷಣೆ ತಡೆ ಹಾಗೂ ಮಹಿಳೆಯರ ಸಂರಕ್ಷಣೆ ಅಷ್ಟೇ ಆಯೋಗದ ಕೆಲಸ.

ಪ್ರಶ್ನೆ: ಮಹಿಳಾ ಅಭಿವೃದ್ಧಿ ನಿಗಮದಲ್ಲಿಯೂ ಇಂಥ ಯೋಜನೆಗಳಿಲ್ಲವೇ?
ಸರೋಜಿನಿ: ಇಲ್ಲಮ್ಮ. ಉದ್ಯೋಗಕ್ಕೆ ಮಾತ್ರ ನಾವು ಸಾಲ ಸೌಲಭ್ಯ ಕೊಡುತ್ತೇವೆ. ಶಿಕ್ಷಣಕ್ಕಲ್ಲ.
ಗ್ರಾಮೀಣ ಬಡ ವಿದ್ಯಾರ್ಥಿನಿಯರ ಈ ಗೋಳನ್ನು ನಿವಾರಿಸಲಿಕ್ಕಾಗಿಯೇ ಮಹಿಳಾ ಅಭಿವೃದ್ಧಿ ನಿಗಮದಿಂದ `ಶಿಕ್ಷಣ ಅಭಿಯಾನ ಯೋಜನೆ~ ಜಾರಿಗೆ ನಿರ್ಧರಿಸಲಾಗಿತ್ತು.

ಪ್ರತಿ ವಿದ್ಯಾರ್ಥಿನಿಗೆ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣಕ್ಕೆ ಸಾಲದ ರೂಪದಲ್ಲಿ ನೆರವು ನೀಡುವ ಯೋಜನೆ ಇದಾಗಿತ್ತು. ಕ್ರಾಂತಿಕಾರಿ ಈ ಯೋಜನೆಗೆ ಮುಖ್ಯಮಂತ್ರಿಗಳು ಸಹ ಒಪ್ಪಿದ್ದರು. ಆದರೆ, ಅಧಿಕಾರಿಗಳು ಕೊಕ್ಕೆ ಹಾಕಿದ್ದರಿಂದ ಈ ಯೋಜನೆ ಇನ್ನೂ ಜಾರಿಯಾಗಿಲ್ಲ.

ಪ್ರಶ್ನೆ: ಮಹಿಳಾ ವಿವಿ ವ್ಯಾಪ್ತಿಗೆ ಏಕಿ ಮಿತಿ ವಿಧಿಸಲಾಗಿದೆ?
ಸರೋಜಿನಿ:
ಮಹಿಳಾ ವಿವಿಯ ವ್ಯಾಪ್ತಿಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಬೇಕು ಎಂದು ನಾವೂ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಈ ವಿಷಯದಲ್ಲಿ ನಿಮ್ಮ ಬೆನ್ನಿಗೆ ನಾವಿರುತ್ತೇವೆ.

ಪ್ರಶ್ನೆ: ಇದು ಅತ್ಯಂತ ಹಿಂದುಳಿದ ಪ್ರದೇಶ. ಇಲ್ಲಿ ನಿಮ್ಮ ಆಯೋಗ- ನಿಗಮದಿಂದ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ನಿಲಯ ಮತ್ತಿತರ ಸೌಲಭ್ಯ ನೀಡಲು ಆಗಲ್ವಾ?
ಮಂಜುಳಾ ಮತ್ತು ಸರೋಜಿನಿ: ಸದ್ಯಕ್ಕಂತೂ ನಮ್ಮಲ್ಲಿ ಈ ಯೋಜನೆ ಇಲ್ಲ. ಮಹಿಳಾ ವಿಶ್ವವಿದ್ಯಾಲಯದ ಪುನಃಶ್ಚೇತನಕ್ಕೆ ಆಗಬೇಕಿರುವ ಕಾರ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನೊಳಗೊಂಡ ಒಂದು ವಿಚಾರ ಸಂಕಿರಣವನ್ನು ಇ್ಲ್ಲಲಿಯೇ ಮಾಡುತ್ತೇವೆ. ಸಂಬಂಧಿಸಿದವರಿಗೆ ಸಮಸ್ಯೆಗಳ ಅರಿವು ಮಾಡಿಸಿ ನಂತರ ವಿವಿಯ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡುತ್ತೇವೆ.

*****
ಹೌದು, ಅವರು ಹೇಳುವುದೆಲ್ಲ ಸರಿ.
ಮಹಿಳಾ ವಿವಿಯ ಕುಲಪತಿ ಡಾ.ಗೀತಾ ಬಾಲಿ, ವಿದ್ಯಾರ್ಥಿನಿಯರ ವಾಸ್ತವ ಸಮಸ್ಯೆಗಳತ್ತ ಬೆಳಕು ಚೆಲ್ಲಿದರು. ಅವರ ಖಡಕ್ ಮಾತು ಹೀಗಿತ್ತು...

`ಹೌದು. ನಮ್ಮ ವಿದ್ಯಾರ್ಥಿನಿಯರು ಹೇಳುತ್ತಿರುವುದೆಲ್ಲ ನಿಜ. ನಮ್ಮ ವಿವಿ ಅತ್ಯಂತ ಹಿಂದುಳಿದ ಪ್ರದೇಶದಲ್ಲಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿನಿಯರೇ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ವಿವಿಗಳಿಗಿಂತಲೂ ನಮ್ಮ ವಿವಿಯ ಫೀ ಅತ್ಯಂತ ಕಡಿಮೆ ನಿಗದಿ ಮಾಡಿದ್ದೇವೆ. ನಮಗೆ ಆರ್ಥಿಕ ತೊಂದರೆಯಾದರೂ ಸಹ ಫೀ ಹೆಚ್ಚಿಸಿಲ್ಲ~.

`ಮಹಿಳಾ ಸಬಲೀಕರಣವಾಗಬೇಕು ಎಂದು ಬರೀ ಹೇಳಿದರೆ ಸಾಲದು. ಮಂತ್ರದಿಂದ ಮಾವಿನಕಾಯಿ ಉದುರದು. ರಾಜ್ಯದಲ್ಲಿರುವ ಎಲ್ಲ ಮಹಿಳಾ ಕಾಲೇಜುಗಳಿಗೆ ಆರ್ಥಿಕ ಅನುದಾನ ನೀಡಬೇಕು ಎಂಬುದು ನನ್ನ ಸಲಹೆ. ಇದರಿಂದಾಗಿ ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಎಲ್ಲವೂ ಏಕಕಾಲಕ್ಕೆ ಮಾಡಲಾಗದಿದ್ದರೂ ಹಂತ ಹಂತವಾಗಿ ಮಾಡಬಹುದು...~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT