ADVERTISEMENT

ಪೊಲೀಸರಿಂದ ಹಲ್ಲೆ; ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:53 IST
Last Updated 13 ಏಪ್ರಿಲ್ 2013, 5:53 IST

ವಿಜಾಪುರ: ಟಿವಿ-9 ವರದಿಗಾರ ಅಶೋಕ ಯಡಳ್ಳಿ, ಜನಶ್ರೀ ವರದಿಗಾರ ಶರಣಪ್ಪ ಮಸಳಿ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ದವರು ಗುರುವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

`ಬುಧವಾರ ರಾತ್ರಿ 8ರ ಸುಮಾರು ಈ ಇಬ್ಬರು ವರದಿಗಾರರು ಸರಾಫ್ ಬಜಾರ್‌ನಲ್ಲಿರುವ ಕೋರಿಯರ್  ಕಚೇರಿಗೆ ಹೋಗಿದ್ದರು. ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಬೈಕ್ ನಿಲ್ಲಿಸಿದ್ದರು. ವಾಪಸ್ಸು ಬರುವಷ್ಟರಲ್ಲಿ ಕಾನ್‌ಸ್ಟೆಬಲ್ ಸುರೇಶ ಸಿ. ಮಾಳಬಾಗಿ ಬೈಕ್‌ನ ಚಕ್ರದ ಗಾಳಿ ತೆಗೆದಿದ್ದರು' ಎಂದರು.

`ಚಕ್ರದ ಗಾಳಿ ಬಿಟ್ಟಿದ್ದೇಕೆ? ನಮಗೆ ತುರ್ತು ಕೆಲಸವಿತ್ತು. ಇದು ಅನ್ಯಾಯ, ನಮ್ಮದೇನಾದರೂ ತಪ್ಪಿದ್ದರೆ, ಕಾನೂನು ಉಲ್ಲಂಘಿಸಿದ್ದರೆ, ತಪ್ಪು ಜಾಗೆಯಲ್ಲಿ ಪಾರ್ಕಿಂಗ್ ಮಾಡಿದ್ದಲ್ಲಿ ದಂಡ ವಿಧಿಸಬೇಕಿತ್ತು. ಈ ರೀತಿ ಚಕ್ರದ ಗಾಳಿ ಬಿಡುವುದು ತಪ್ಪು ಎಂದು ಅವರು ಪ್ರಶ್ನಿಸಿದರು. ಆಗ ಇದ್ದಕ್ಕಿದ್ದಂತೆ ಕಾನ್‌ಸ್ಟೆಬಲ್ ಸುರೇಶ ಮಾಳಬಾಗಿ ಹಾಗೂ ಅಲ್ಲಿಗೆ ಬಂದ ಮತ್ತೊಬ್ಬ ಕಾನ್‌ಸ್ಟೆಬಲ್ ಬಿ.ವಿ. ಪವಾರ ಪತ್ರಕರ್ತರು ಹಾಗೂ ಅವರನ್ನು ಬೆಂಬಲಿಸಿದ ಅಂಗಡಿ ಕಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾರಂಭಿಸಿದರು' ಎಂದು ದೂರಿದರು.

`ಮಾಧ್ಯಮ ಮಿತ್ರರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಯಲ್ಲಿ ಮಾತನಾಡಲು ಆ ಕಾನ್‌ಸ್ಟೆಬಲ್ ನಿರಾಕರಿಸಿದರು. ಅಷ್ಟೊತ್ತಿ ಗಾಗಲೇ ಗಾಂಧಿಚೌಕ್ ಪಿಎಸ್‌ಐ ಆರ್.ಆರ್. ಪಾಟೀಲ, ಸಂಚಾರ ಠಾಣೆಯ ಪಿಎಸ್‌ಐಗಳಾದ ಸಿ.ಬಿ. ಬಾಗೇವಾಡಿ, ವಾಜೀದ್ ಪಟೇಲ್ ಸಿಬ್ಬಂದಿಯೊಂದಿಗೆ ವಾಹನದಲ್ಲಿ ಅಲ್ಲಿಗೆ ಧಾವಿಸಿದರು. ನ್‌ಸ್ಟೆಬಲ್‌ಗಳು ಈ ವರದಿಗಾರರು ಹಾಗೂ ಘಟನಾ ಸ್ಥಳದಲ್ಲಿದ್ದ ವರ್ತಕ ರವಿ ಉಮರಾಣಿ ಮತ್ತಿತರರನ್ನು ಥಳಿಸಿ, ಅವರ ಮೊಬೈಲ್‌ಗಳನ್ನು ಕಿತ್ತು ಕೊಂಡರು' ಎಂದು ಆಪಾದಿಸಿದರು.

`ತಡವಾಗಿ ಸ್ಥಳಕ್ಕೆ ಬಂದ ಸಿಪಿಐ ಪುಟ್ಟಸ್ವಾಮಿ ಈ ವರದಿಗಾರರನ್ನು ತಮ್ಮ ವಾಹನದಲ್ಲಿ ಕೂಡ್ರಿಸಿಕೊಂಡು ಹೋಟೆಲ್‌ಗೆ ಬಲವಂತವಾಗಿ ಕರೆದುಕೊಂಡು ಹೋಗಿ ರಾಜಿಸಂಧಾನ ಮಾಡಿಸಲು ಯತ್ನಿಸಿದರು.  ನಂತರ ಗಾಂಧಿಚೌಕ್ ಪೊಲೀಸ್ ಠಾಣೆಗೆ ಬಂದ ಎಸ್ಪಿ ಅಜಯ್ ಹಿಲೋರಿ, ಹೆಚ್ಚುವರಿ ಎಸ್ಪಿ ಎಫ್.ಎ. ಟ್ರಾಸ್ಗರ್ ಅವರು ದೂರು ದಾಖಲಿಸು ವುದು ಬೇಡ. ಘಟನೆಯ ಸಂಕ್ಷಿಪ್ತ ಮಾಹಿತಿ ಬರೆದುಕೊಡಿ. ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು. ಅದರಂತೆ ಅವರಿಗೆ ದೂರು ಬರೆದು ಸಲ್ಲಿಸ ಲಾಯಿತು' ಎಂದು ಘಟನೆಯ ಮಾಹಿತಿ ಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.

`ಪೊಲೀಸ್ ದೌರ್ಜನ್ಯ ಹೆಚ್ಚುತ್ತಿದ್ದು, ಅದನ್ನು ತಡೆಯಬೇಕು. ಘಟನೆಗೆ ಕಾರಣರಾದ ಕಾನ್‌ಸ್ಟೆಬಲ್‌ಗಳಾದ ಸುರೇಶ ಸಿ.ಮಾಳಬಾಗಿ, ಬಿ.ವಿ. ಪವಾರ, ಗಾಂಧಿಚೌಕ್ ಪಿಎಸ್‌ಐ ಆರ್.ಆರ್. ಪಾಟೀಲ್, ಸಂಚಾರ ಪಿಎಸ್‌ಐ ಸಿ.ಬಿ. ಬಾಗೇವಾಡಿ, ಎಎಸ್‌ಐ ಪಾಟೀಲ ಅವರನ್ನು ಅಮಾನತುಗೊಳಿಸಬೇಕು. ಪಿಎಸ್‌ಐ ವಾಜೀದ್ ಪಟೇಲ್ ಹಾಗೂ ಸಿಪಿಐ ಪುಟ್ಟಸ್ವಾಮಿ ಅವರನ್ನು ಅನ್ಯಜಿಲ್ಲೆಗೆ ವರ್ಗಾವಣೆ ಮಾಡಬೇಕು' ಎಂದು ಒತ್ತಾಯಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕೊಂಡಗೂಳಿ, ಹಿರಿಯ ಪತ್ರಕರ್ತ ಗೋಪಾಲ ನಾಯಕ, ಅನಿಲ ಹೊಸಮನಿ, ಸದಾನಂದ ಮೋದಿ ಮತ್ತಿತರರು, ಹಲ್ಲೆಗೊಳಗಾದ ಅಶೋಕ ಯಡಳ್ಳಿ, ಶರಣಪ್ಪ ಮಸಳಿ ಇತರರು ಈ ಸಂದರ್ಭದಲ್ಲಿದ್ದರು.

ಜಮಖಂಡಿಯಲ್ಲಿ ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ
ಜಮಖಂಡಿ:
ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಇಲ್ಲಿನ ಡಾ.ಅಂಬೇಡ್ಕರ್ ಸರ್ಕಲ್ ಸಮೀಪದ ಪಡಸಲಗಿ ಕಾಂಪ್ಲೆ ಕ್ಸ್‌ನ `ಕಾರ ಅಲಂಕಾರ' ಎಂಬ ಹೆಸರಿನ ಪ್ರವೀಣ ತಾನಪ್ಪಗೋಳ ಎಂಬುವವ ರಿಗೆ ಸೇರಿದ ಅಂಗಡಿ ಸುಟ್ಟು ಕರಕಲಾಗಿ ಅಂದಾಜು ರೂ.6 ಲಕ್ಷ ಹಾನಿಯಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

ಹಿಂಬದಿಯ ಕಿಡಕಿಯ ಸರಳುಗಳನ್ನು ಕಿತ್ತು ಒಳ ಪ್ರವೇಶಿಸಿರುವ ದುಷ್ಕರ್ಮಿ ಗಳು ಮುಂಭಾಗದ ಬಾಗಿಲಿನ ಶಟರ್ಸ್‌ ಹೊರಗಿನಿಂದ ತೆರೆಯದಂತೆ ಜಜ್ಜಿ ಜಖಂಗೊಳಿಸಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಬಾಗಲಕೋಟೆಯ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ತಂಡ ಸ್ಥಳದ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.