ADVERTISEMENT

ಬಣ್ಣದಾಟದ ಮೋಜು, ಸೋಗಿನ ಸೊಬಗು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 6:43 IST
Last Updated 18 ಮಾರ್ಚ್ 2014, 6:43 IST

ವಿಜಾಪುರ: ಗಲ್ಲಿ ಗಲ್ಲಿಗಳಲ್ಲಿ ಹಲಗೆಗಳ ನಿನಾದ. ಬಣ್ಣದಲ್ಲಿ ಮಿಂದೆದ್ದ ಮಕ್ಕಳು–ಯುವಜನ. ಇದಕ್ಕೆ ಬೆಂಬಲ ಎಂಬಂತೆ ಸ್ಥಗಿತಗೊಂಡ ವ್ಯಾಪಾರ–ವಹಿವಾಟು. ಬಣ್ಣ ಎರಚಾಟಕ್ಕೆ ಬೆದರಿ ನಗರದತ್ತ ಸುಳಿಯದ ಗ್ರಾಮೀಣ ಜನ. ಪರಿಣಾಮ ಬಿಕೋ ಎನ್ನುತ್ತಿದ್ದ ರಸ್ತೆಗಳು. ಶಾಲಾ– ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ದುಪ್ಪಟ್ಟು ಖುಷಿ.

ಹೋಳಿ ಹುಣ್ಣಿಮೆ ಅಂಗವಾಗಿ ಸೋಮವಾರ ನಗರದಲ್ಲಿ ರಂಗಿನಾಟ ಬಲು ಜೋರಲಾಗಿತ್ತು. ಬಣ್ಣ ಮತ್ತು ಬಣ್ಣದಾಟದ ಸಾಮಗ್ರಿಗಳನ್ನು ಮುಂಚಿತವಾಗಿಯೇ ತಂದಿಟ್ಟುಕೊಂಡಿದ್ದ ಚಿಣ್ಣರು, ಹಾಸಿಗೆಯಿಂದ ಏಳುತ್ತಲೇ ರಸ್ತೆಗಿಳಿ­ದರು. ಬಣ್ಣ ತುಂಬಿದ ಬಾಟಲ್‌, ಪಿಚಗಾರಿ­ಗಳನ್ನು ಕೈಯಲ್ಲಿ ಹಿಡಿದು ಗೆಳೆಯರೊಂದಿಗೆ ಪರಸ್ಪರ ಬಣ್ಣ ಎರೆಚಾಡಿ ಹಬ್ಬಕ್ಕೆ ಚಾಲನೆ ನೀಡಿದರು.  ಬಸಿಲೇರಿದಂತೆ ಯುವಕರು ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಹಲವು ಬಡಾವಣೆಗಳಲ್ಲಿ ಯುತಿಯರು–ಮಹಿಳೆಯರು ಬಣ್ಣದ ಆಟವಾಡಿ ಹಬ್ಬಕ್ಕೆ ಮೆರಗು ತಂದರು.

ಜಿಲ್ಲೆಯ ಇತರ ಪ್ರದೇಶಗಳಲ್ಲಿಯೂ ಈ ಬಣ್ಣದಾಟದ ಮೋಜಿಗೆ ಕೊರತೆ ಇರಲಿಲ್ಲ. ಬಣ್ಣದಾಟ ಮುಗಿಯುತ್ತಿದ್ದಂತೆಯೇ ಬಗೆ ಬಗೆಯ ಸೋಗು (ವೇಷ) ಧರಿಸಿಕೊಂಡು ಮನೆ ಮನೆಗೆ ಹೋಗಿ ಹಣ ಕೇಳುವುದು, ಹಣ ಕೊಡುವವ­ರೆಗೂ ಮನೆಯ ಎದುರು ಬಾಯಿ ಬಡಿದು­ಕೊಳ್ಳುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದ್ದವು.

ಹುಣ್ಣಿಮೆಯ ದಿನವಾದ ಭಾನುವಾರ ನಗರವೂ  ಸೇರಿದಂತೆ ಎಲ್ಲೆಡೆ ಕಾಮ ದಹನ ನಡೆಸಲಾಯಿತು. ಜನರು ತಮ್ಮ ಮನೆಯ ಅಂಗಳದಲ್ಲಿ ಕುಳ್ಳು–ಕಟ್ಟಿಗೆಗಳ ರಾಶಿ ಹಾಕಿದ್ದರು. ಕಾಮನ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ಕಾಮ ದಹನ ಮಾಡಿದರು.
ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ಜನರು ಅರ್ಥಪೂರ್ಣವಾಗಿ ಆಚರಿಸಿದ ನೋಟ ಕಂಡು ಬಂತು. ಊರ ಹಿರಿಯರು ಪಾಲ್ಗೊಂಡು ಹೋಳಿ ಪದಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರೆ, ಮಹಿ­ಳೆಯರು ಈ ಹಾಡುಗಳಿಗೆ ಸವಾಲಿನ ರೂಪದಲ್ಲಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.

ಇನ್ನು ಕೆಲವೆಡೆ ರಾಜಕೀಯ ಮುಖಂಡರು ಈ ಹಬ್ಬದಲ್ಲಿ ಪಾಲ್ಗೊಂಡು ಯುವಜನತೆಯನ್ನು ಆಕರ್ಷಿಸಲು ಯತ್ನಿಸಿದರು. ವಿಜಾಪುರ ನಗರದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ತಮ್ಮ ದೇಹದ ಮೇಲೆ ಬಣ್ಣದಿಂದ ಪಕ್ಷದ ಹೆಸರು, ಮೋದಿ ಎಂಬ ಶಬ್ದ ಬರೆದುಕೊಂಡು ಅದನ್ನು ಪ್ರದರ್ಶಿಸುತ್ತ ಚುನಾವಣಾ ಪ್ರಚಾರ ನಡೆಸಿದ ನೋಟವೂ ಕಂಡು ಬಂತು. ಇಂಡಿ ಪಟ್ಟಣ ಹಾಗೂ ಕೆಲ ಗ್ರಾಮಗಳನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಈ ಹಬ್ಬದ ಸಂಭ್ರಮ ಇತ್ತು. ವಿಜಾಪುರ ನಗರ ಸೇರಿದಂತೆ ಇದೇ 20ರಂದು ರಂಗಪಂಚಮಿ ಆಚರಿಸಲಾಗುತ್ತಿದೆ.

ಹಬ್ಬದ ಸಡಗರ
ತಾಳಿಕೋಟೆ:
ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಶಿವರಾತ್ರಿ ಅಮಾವಾಸ್ಯೆಯ ಮರುದಿನದಿಂದಲೇ ಆರಂಭವಾಗಿರುವ ಹಲಗೆಗಳ ಬಡಿತ ಕಾಮದಹನದಂದು ತಾರಕಕ್ಕೇರಿತ್ತು.

ಪರೀಕ್ಷೆ ಕಾರಣ ಮಕ್ಕಳಿಗೆ, ಹಲಗೆ ಸಪ್ಪಳದಿಂದ ಕಿರಿಕಿರಿ ಅನುಭವಿಸಿದರು. ಕಾಮ ದಹನ ವಿವಿಧ ಬಡಾವಣೆಗಳಲ್ಲಿ ಸಡಗರದಿಂದ ನಡೆಯಿತು.

ಸಂಪ್ರದಾಯದಂತೆ ಪಟ್ಟಣದ ಕತ್ರಿಬಜಾರ­ದಲ್ಲಿ ವರ್ತಕರ ಸಂಘದ ವತಿಯಿಂದ ಕಾಮ­ದಹನ ನೆರವೇರಿತು.  ಕಾಮದಹನದ ಮುನ್ನ ಬಾಜಾ ಭಜಂತ್ರಿ ಸಮೇತ ಜಾಡಗೌಡರ ಮನೆಗೆ ತೆರಳಿ ಅವರ ಮನೆಯಿಂದ ಹೋಳಿಗೆ ಎಡೆಯನ್ನು ಕತ್ರಿ ಬಜಾರ್‌ ವರೆಗೆ ಹಲಗೆ ಮೇಳ­ದೊಂದಿಗೆ ತಂದು ಕಾಮದಹನ ಮಾಡಲಾಯಿತು.

ಬೆಳಿಗ್ಗೆ ಮಕ್ಕಳು ಓಣಿ– ಓಣಿಗಳಲ್ಲಿ ವಿವಿಧ ಬಣ್ಣದ ನೀರಿನೊಂದಿಗೆ ಪರಸ್ಪರ ಎರಚಿಕೊಂಡು ಸಂತಸ ಪಟ್ಟರಲ್ಲದೇ ರಸ್ತೆಯಲ್ಲಿ ಹೋಗಿ– ಬರುವವರಿಗೆಲ್ಲ ಬಣ್ಣ ಎರಚಿ ಕೇಕೆ ಹಾಕುತ್ತಿದ್ದುದು ಸಾಮಾನ್ಯವಾಗಿತ್ತು. ಸಂತೆಯ ದಿನವಾದ್ದರೂ ಪಟ್ಟಣದ ಅಂಗಡಿ–ಮುಂಗಟ್ಟುಗಳು ಮುಚ್ಚಿದ್ದವು.

ಬಣ್ಣದೋಕುಳಿ
ಸಿಂದಗಿ
: ನಗರದಲ್ಲಿ ಯುವಕರು, ಮಕ್ಕಳನ್ನೊಳಗೊಂಡು ಮಹಿಳೆಯರು ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.

ಎಲ್ಲ ರಸ್ತೆಗಳಲ್ಲಿ, ಓಣಿಗಳಲ್ಲಿ ಮಕ್ಕಳು ಬಣ್ಣ ತುಂಬಿದ ಪಿಚಕಾರಿ ಹಿಡಿದುಕೊಂಡು ಹೋಗುವವರ ಮೇಲೆ ಬಣ್ಣ ಚೆಲ್ಲುತ್ತ ಬೊಬ್ಬೆ ಹಾಕುತ್ತಿದ್ದರು.

ಕೆಲವು ಯುವಕರ ಮುಖ ಗುರುತಿಸದ ರೀತಿಯಲ್ಲಿ ಮುಖಕ್ಕೆ ಬಣ್ಣ ತೇಪೆ ಹಚ್ಚಲಾಗಿತ್ತು. ಹಲಗೆ ಬಾರಿಸುತ್ತ ಬೈಕ್ ಮೇಲೆ ನಾಲ್ಕು, ನಾಲ್ಕು ಜನ ಯುವಕರು ಓಡಾಡುತ್ತಿರುವುದು ಸಾಮಾ­ನ್ಯವಾಗಿತ್ತು. ಇನ್ನೂ ಕೆಲವರು ಗುಂಡು (ಸಾರಾಯಿ) ಹಾಕಿಕೊಂಡು ತೂರಾಡುತ್ತ ಹೋಳಿ ಹುಣ್ಣಿಮೆ ಪದಗಳನ್ನು ಹಾಡುತ್ತ ತಿರು­ಗಾ­ಡುತ್ತಿದ್ದರು. ಹೊಯ್ಕೊಂಡ ಬಾಯಿಗೆ ಹೋಳಿಗೆ ಎಂಬಂತೆ ನಂತರ ಗೆಣಸಿನ ಹೋಳಿಗೆ ಮತ್ತು ಹೂರಣದ ಹೋಳಿಗೆ, ಕಡಬು ತಿನ್ನುವುದು ವಾಡಿಕೆ.ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು, ಉಪ­ನ್ಯಾ­ಸಕರು ಬಣ್ಣದೋಕುಳಿಯಿಂದ ತಪ್ಪಿಸಿ­ಕೊ­ಳ್ಳಲು ತುಂಬಾ ಪ್ರಯಾಸ ಪಡುತ್ತಿರುವುದು ಕಂಡು ಬಂದಿತು.

ಹಾಡು, ಕುಣಿತ
ಬಸವನಬಾಗೇವಾಡಿ:
ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಸೋಮವಾರ ಹೋಳಿ ಹಬ್ಬದ ಅಂಗವಾಗಿ ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಬಣ್ಣದಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ತಾಲ್ಲೂಕಿನ ವಿವಿಧೆಡೆ ಗಲ್ಲಿಗಲ್ಲಿಗಳಲ್ಲಿ ಕಾಮದಹನ ಮಾಡಿದರು. ಹಲಗೆಯ ನಾದಕ್ಕೆ ಹೋಳಿ ಹಾಡು ಹಾಡಿ ಕುಣಿದು ಕುಪ್ಪಳಿಸಿದರು. ಬಣ್ಣದ ಹಬ್ಬವು ವಾರದ ಸಂತೆ ದಿನದ ಮೇಲೆ ಪರಿಣಾಮ ಬೀರಿರಲಿಲ್ಲ. ಆದರೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಮಾರುಕಟ್ಟೆಯ ಪ್ರಮುಖ ಸ್ಥಳದಲ್ಲಿ ಪ್ರತಿವಾರ ಕಂಡುಬರುತ್ತಿದ್ದ ಅಪಾರ ಜನಜಂಗುಳಿ ಕಂಡು ಬರಲಿಲ್ಲ. ಇದೇ 21ರಂದು ನಡೆಯುವ ರಂಗ­ಪಂಚ­ಮಿಯನ್ನು ಇನ್ನೂ ಅದ್ದೂರಿಯಾಗಿ ಆಚರಿ­ಸಲಾಗುವುದು ಎಂದು ಯುವಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.