ADVERTISEMENT

ಬದಿಯಲ್ಲಿ ಭೀಮಾನದಿ: ಕುಡಿವ ನೀರಿಗೆ ಬರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 4:30 IST
Last Updated 18 ಜೂನ್ 2012, 4:30 IST
ಬದಿಯಲ್ಲಿ ಭೀಮಾನದಿ: ಕುಡಿವ ನೀರಿಗೆ ಬರ
ಬದಿಯಲ್ಲಿ ಭೀಮಾನದಿ: ಕುಡಿವ ನೀರಿಗೆ ಬರ   

ಚಣೇಗಾಂವ (ಇಂಡಿ): ನಮ್ಮೂರಿನ ಬಗಲಲ್ಲಿಯೇ (ಬದಿಯಲ್ಲಿಯೇ) ಭೀಮಾ ನದಿ ಹರಿದಿದೆ. ಆದರೆ ಬೇಸಿಗೆಯ ಹಂಗಾಮಿನಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.

ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಲಕ್ಷಾಂತರ ರೂಪಾಯಿ  ವೆಚ್ಚಮಾಡಿ ಮೇಲೆತ್ತರದ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಅದಕ್ಕೆ ನೀರು ತುಂಬಿಸಲು ಗ್ರಾಮದ ಹತ್ತಿರವೇ ಕೊಳವೆ ಬಾವಿ ತೋಡಿ ಅದಕ್ಕೆ ವಿದ್ಯುತ್ ಪಂಪಸೆಟ್  ಅಳವಡಿಸಲಾಗಿದೆ. ಆದರೆ  4 ವರ್ಷಗಳಿಂದಲೂ ಒಂದೂ ದಿವಸ ಟ್ಯಾಂಕಿಗೆ ನೀರು ತುಂಬಿ ಗ್ರಾಮಕ್ಕೆ ನೀರು ಸರಬರಾಜು ಮಾಡಿಲ್ಲ. ಇದಕ್ಕೆ ನಿರ್ವಹಣೆಯ ಕೊರತೆಯೇ ಕಾರಣವಾಗಿದೆ.

ಪೈಪು ಒಡೆಯುತ್ತದೆ ಎಂಬ ಕಾರಣ ನೀಡಿ ನೀರು ಪೂರೈಸುತ್ತಿಲ್ಲ. ಇದೀಗ ಮತ್ತೊಂದು ಕೊಳವೆ ಬಾವಿ ತೋಡಿ   ಪೈಪ್‌ಲೈನ್ ಅಳವಡಿಸಿ ಗ್ರಾಮಕ್ಕೆ ನೀರು ಒದಗಿಸಲಾಗುತ್ತದೆ. ಅದೂ ಆಗಾಗ ಒಡೆಯುತ್ತಲೇ ಇದೆ. ಇದರಿಂದ ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರು ಲಭಿಸುತ್ತಿಲ್ಲ.

ಗ್ರಾಮದಿಂದ 3 ಕಿಲೋ ಮೀಟರ್ ಅಂತರದಲ್ಲಿರುವ ಸಿಹಿ ನೀರಿನ ಒಂದು ಕೊಳವೇ ಬಾವಿಯೇ ಚಣೆಗಾಂವ ಗ್ರಾಮದ ಜನರಿಗೆ ಆಸರೆಯಾಗಿದೆ. ಅದು ಗ್ರಾಮದಿಂದ ದೂರವಿದ್ದ ಕಾರಣ ಅಲ್ಲಿಂದ ನೀರು ತರಬೇಕಾದರೆ ಹರಸಾಹಸ  ಮಾಡಬೇಕು. 

ಅದಕ್ಕೆ ಯಾವಾಗಲೂ ಪಾಳಿ ಇರುತ್ತದೆ. ಒಂದು ಕೊಡ ನೀರಿಗೆ ಗಂಟೆಗಟ್ಟಲೇ ಕಾಯಬೇಕು.  ಸರ್ಕಾರ ಈ ಕೂಡಲೇ ಗ್ರಾಮದಲ್ಲಿ ನಿರ್ಮಿಸಿದ ಟ್ಯಾಂಕಿಗೆ ನೀರು ಸರಬರಾಜು ಮಾಡಿ ಕುಡಿಯುವ ನೀರು ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಬತ್ತಿದ ಭೀಮೆ: ಭೀಮಾ ನದಿ ಬತ್ತಿ  ಮೂರು ತಿಂಗಳಾಗಿದೆ.  ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಭೀಮಾ ನದಿಯ ಗುಂಡಿಗಳಲ್ಲಿ ನಿಂತ ನೀರನ್ನೇ ಜಾನುವಾರುಗಳು ಕುಡಿಯುತ್ತಿವೆ. ಇದರಿಂದ ಅವುಗಳಿಗೆ ರೋಗ ಬರಹತ್ತಿದೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಹರಿಸಬೇಕು ಎಂದು  ಶಾಸಕ ವಿಠ್ಠಲ ಕಟಕದೋಂಡ ಅವರಿಗೆ ಗ್ರಾಮದ ಪ್ರಮುಖರಾದ ದುಂಡಪ್ಪ ಪೂಜಾರಿ, ಶಿವಾನಂದ ನಾವಿ, ಮಾಳಪ್ಪ ಕೋಟಿ, ಖರೀದ ವಾಲೀಕಾರ, ಅಶೋಕ ಭೌರಣ್ಣವರ, ಬಾಬುರಾಯ ಬಿರಾದಾರ, ನೀಲವ್ವ ಕುಂಬಾರ, ಸುಗಲಾಬಾಯಿ ಕುಂಬಾರ, ರೇವಮ್ಮ ಅಗಸರ ಮತ್ತು ಸಾಂತಾಬಾಯಿ ಬಡಿಗೇರಿ ಮನವಿ ಮಾಡಿದ್ದಾರೆ.

ಭೀಮಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು ಎಂದು  ಎಂದು ದುಂಡಪ್ಪ ಪೂಜಾರಿ, ಗಿರಿಮಲ್ಲಪ್ಪ ಚಾಕೋತೆ, ಶಂಕರ ಪಾಟೀಲ, ಶಿವಶರಣ, ಗೊಳ್ಳಗಿ, ಬಾಬುರಾಯ ಬಿರಾದಾರ, ಯಳೇಗಾಂವ ಮಾಳಪ್ಪಣ್ಣ ಕೋಟಿ, ಮಲ್ಲಿಕಾರ್ಜುನ, ರಾಜು, ಹೊನ್ನಕಸ್ತೂರಿ, ಕಲ್ಲಪ್ಪ ಗುಮತೆ, ಧರ್ಮರಾಯ ಬಿರಾದಾರ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಗ್ರಾಮದ ಹೊರ ವಲಯದಲ್ಲಿ ಒಂದು ಕೊಳವೆ ಬಾವಿ ತೋಡಲಾಗಿದೆ. ಅದಕ್ಕೆ ಸಾಕಷ್ಟು ನಿರಿದೆ. ಅದಕ್ಕೆ ಪೈಪ್‌ಲೈನ್ ಅಳವಡಿಸಿ ಗ್ರಾಮಕ್ಕೆ ನೀರು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.