ತಾಳಿಕೋಟೆ: ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆ ರಜಾ ಅವಧಿಯಲ್ಲೂ 1ರಿಂದ 8ನೇ ತರಗತಿಯ ಮಕ್ಕಳಿಗೆ ಬಿಸಿಯೂಟ ಒದಗಿಸಬೇಕೆಂಬ ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಆರಂಭಿಸುವಂತೆ ತಾಲ್ಲೂಕು ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಪಿ.ಬಿ. ದೊಡಮನಿ ತಿಳಿಸಿದರು.
ಅಕ್ಷರ ದಾಸೋಹದ ಸಿಬ್ಬಂದಿಗಾಗಿ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 6ರಿಂದ 14 ವರ್ಷ ವಯೋಮಿತಿ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಯೆಡೆಗೆ ಆಕರ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಬಿಸಿಯೂಟದ ಯೋಜನೆ ಆರಂಭಿಸಿದೆ. ಶುಚಿ, ರುಚಿಯುಳ್ಳ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ಸಂಯೋಜಕ ಎಸ್.ಎಸ್. ಗಡೇದ, ಸಂಪನ್ಮೂಲ ವ್ಯಕ್ತಿಗಳಾದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ವಿ. ಕೋರಿ, ಎಂ.ಎ. ತಳ್ಳಿಕೇರಿ ಅಕ್ಷರ ದಾಸೋಹದ ಕುರಿತು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸ್.ಎಸ್.ಬಾಗೇವಾಡಿ ಹಾಗೂ ಎಸ್.ಸಿ. ದೇಸಾಯಿ ಆರೋಗ್ಯ ರಕ್ಷಣೆಯ ಬಗ್ಗೆ, ಇಂಡೇನ್ ಗ್ಯಾಸ್‌ನ ಸಿಬ್ಬಂದಿ ಲಕ್ಷ್ಮಣ ಹಾಗೂ ಸುರೇಶ ಗ್ಯಾಸ್ ಬಳಕೆಯಲ್ಲಿ ಸುರಕ್ಷತೆಯ ಬಗ್ಗೆ, ಅಗ್ನಿಶಾಮಕ ದಳದ ಪ್ರಭಾರ ಠಾಣಾಧಿಕಾರಿ ಜೆ.ಚಿತ್ತಣ್ಣ ಹಾಗೂ ಈರಣ್ಣ ಉಂಡಿಯವರು ಸುರಕ್ಷತಾ ಕ್ರಮದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಸಿಬ್ಬಂದಿ ಅಳಲು: ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚುತ್ತಿದ್ದು, ಸರ್ಕಾರದಿಂದ ನೀಡುವ ಗೌರವಧನ ಕಡಿಮೆಯಾಗಿದೆ ಎಂದು ಅಕ್ಷರ ದಾಸೋಹ ಅಡುಗೆ ನೌಕರರು ಅಧಿಕಾರಿಗಳಿಗೆ ಮನವಿ ಮಾಡಿತು.
ಬಳಗಾನೂರ, ತುಂಬಗಿ, ಬೇಲೂರ, ಹಿರೂರ, ಮಸ್ಕಾನಾಳ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದರಿಂದ ಬಿಸಿಯೂಟ ತಯಾರಿಸಲು ತೊಂದರೆ ಆಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.