ADVERTISEMENT

ಬರದ ನಾಡಿನ ಶ್ರೀಮಂತ ಕಾವ್ಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2011, 8:45 IST
Last Updated 18 ಏಪ್ರಿಲ್ 2011, 8:45 IST

ಆಲಮೇಲ: ಬಸವಣ್ಣನವರ ಷಟ್‌ಸ್ಥಲ ವಚನ, ನಾಗಚಂದ್ರನ ಪಂಪರಾಮಾಯಣ, ಆದಿಲ್‌ಶಾಹಿಯ ಕಿತಾಬೆ ನವರಸ್, ನರಹರಿಯ ತೊರೆವೆ ರಾಮಾಯಣ, ಮಹಿಪತಿ ದಾಸರ ಹಾಡುಗಳು, ಹರ್ಡೇಕರ ಮಂಜಪ್ಪನವರ ದೇಶಭಕ್ತಿ ಮೊದಲಾದವುಗಳಿಗೆ ಸಾಕ್ಷಿಯಾದ ವಿಜಾಪುರ ನೆಲದ ಕಾವ್ಯಾಂದೋಲನ ಎಲ್ಲ ಕಾಲಕ್ಕೂ ಹೆಮ್ಮೆಯಿಂದ ಬೀಗುವ ವಿಷಯವಾಗಿದೆ.
ಜಿಲ್ಲೆಯ ಸಾಹಿತಿಗಳು ಎಲ್ಲಾ ವಿಧದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕಾವ್ಯ, ಕಥೆ, ಸಂಶೋಧನೆ, ಕಾದಂಬರಿ, ನಾಟಕ, ವಿಮರ್ಶೆ, ಜಾನಪದ, ಪ್ರವಾಸ ಕಥನ, ಲಲಿತ ಪ್ರಬಂಧ ಹೀಗೆ ಸಾಹಿತ್ಯಕ್ಕೆ ಜೆಲ್ಲೆಯ ಕೊಡುಗೆ ಮಹತ್ವದ್ದು.
 

ಕಾವ್ಯಕ್ಕೆ ಮಧರಚೆನ್ನರು, ನಾಟಕಕ್ಕೆ ಶ್ರೀರಂಗರು, ಸಾಹಿತ್ಯ ಚರಿತ್ರೆಗೆ ರಂ.ಶ್ರೀ.ಮುಗುಳಿಯವರು, ವಿಮರ್ಶೆಗೆ ಸ.ಸ.ಮಾಳವಾಡರು, ಜಾನಪದಕ್ಕೆ ಸಿಂಪಿ ಲಿಂಗಣ್ಣ ನವರು ಕೊಟ್ಟ ಕೊಡುಗೆ ಅವಿಸ್ಮರಣೀಯ.ಬಂಡಾಯದ ಚಿಂತನೆಗೆ ತೊಡಗಿಸುವ ಸೈದ್ದಾಂತಿಕ ನೆಲೆಯಲ್ಲಿ ಕಾರ್ಯ ಮಾಡಿರುವ ಸಿದ್ದನಗೌಡ ಪಾಟೀಲ, ಅರವಿಂದ ಮಾಲಗತ್ತಿಯವರು ಅತ್ಯಂತ ಮಹತ್ವದ ಕವಿಗಳಾಗಿ ಈ ನೆಲವನ್ನು ಪ್ರತಿನಿಧಿಸಿದ್ದಾರೆ. ಮಲ್ಲಿಕಾ ಘಂಟಿ, ಶಶಿಕಲಾ ವೀರಯ್ಯಸ್ವಾಮಿ, ಸರಸ್ವತಿ ಚಿಮ್ಮಲಗಿ, ಜಯಲಕ್ಷ್ಮಿ ಯರನಾಳ ಬಂಡಾಯದ ನೆಲೆಯಲ್ಲಿ ಹೆಸರಿಸಬಹುದಾದ ಈ ಜಿಲ್ಲೆಯ ಇನ್ನಷ್ಟು ಕವಿಗಳು.

ನಂತರದ ಆಯಾಮದಲ್ಲಿ ಚನ್ನಪ್ಪ ಕಟ್ಟಿ, ಸಿದ್ದರಾಮ ಉಪ್ಪಿನ, ಶಂಕರ ಬೈಚಬಾಳ, ಮಲ್ಲಿಕಾರ್ಜುನ ಮೇತ್ರಿ, ಶಂಕರ ಕಟಗಿ ಮೊದಲಾದವರು ಗಟ್ಟಿಕಾವ್ಯ ಕಟ್ಟಿಕೊಟ್ಟು ಜಿಲ್ಲೆಯ ಕಾವ್ಯ ಸಾಹಿತ್ಯಕ್ಕೆ ಗರಿ ಮೂಡಿಸಿದ್ದಾರೆ. ಭಾರತಿ ಪಾಟೀಲರ ‘ಅಕ್ಕ ಕೇಳವ್ವ’, ನಾಗೇಶ ರಾಂಪೂರರ ‘ಮತ್ತೇ ಬಂತು ಶ್ರಾವಣ’, ಶಶಿಕಲಾ ವೀರಯ್ಯಸ್ವಾಮಿಯವರ ‘ಹೆಂಗ ಹೇಳಲಿ ಗೆಳತಿ’ ಮುಂತಾದ ಸಂಕಲನಗಳು ಬರದ ನಾಡು ವಿಜಾಪುರದಲ್ಲಿ ಕಾವ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.
 

ADVERTISEMENT

ಮಕ್ಕಳ ಸಾಹಿತ್ಯ ಎಂದಾಕ್ಷಣ ವಿಜಾಪುರ ಜಿಲ್ಲೆ ಪಾರುಪತ್ಯ ಕಂಡು ಬರುತ್ತದೆ. ಹರ್ಡೇಕರ ಮಂಜಪ್ಪ, ಸಿಸು ಸಂಗಮೇಶ, ಚಿಂತಾಮಣಿ, ಕಂಚ್ಯಾಣಿ ಶರಣಪ್ಪ, ಫ.ಗು.ಸಿದ್ದಾಪುರ ಮುಂತಾದವರು ಎದ್ದು ಕಾಣುತ್ತಾರೆ.ಸಿಂದಗಿ ನೆಲದಲ್ಲಿ ಹ.ಮ.ಪೂಜಾರ, ಚನ್ನಪ್ಪ ಕಟ್ಟಿ, ನಾಗೇಶ ರಾಂಪೂರ, ರಾ.ಶಿ.ವಾಡೇದ, ರಮೇಶ ಕತ್ತಿ. ಶಿವಕುಮಾರ ಶಿವಸಿಂಪಿಗೇರ ಮೊದಲಾದವರು ಕಾವ್ಯವನ್ನು ಸತ್ವಯುತವಾಗಿ ಕಟ್ಟಿಕೊಟ್ಟಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.