ADVERTISEMENT

ಬರದ ನೋವಲ್ಲೂ ದೀಪಾವಳಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:05 IST
Last Updated 27 ಅಕ್ಟೋಬರ್ 2011, 10:05 IST

ವಿಜಾಪುರ: ದೀಪಾವಳಿಯ ಸಂಭ್ರಮ ಬರದ ನಾಡಿನ ಜನತೆಯ ಬವಣೆಯನ್ನೂ ಮರೆಸಿದೆ. ಮನೆ ಮನೆಗಳ ಎದುರು ಬೆಳಗುತ್ತಿರುವ ಹಣತೆಗಳ ಸಾಲು, ಆಕಾಶ ದೀಪ (ಆಕಾಶ ಬುಟ್ಟಿ)ಗಳು ಹಬ್ಬದ ಮೆರುಗನ್ನು ಹೆಚ್ಚಿಸಿವೆ.

ದೀಪಾವಳಿ ಎಂದರೆ `ಸಂಭ್ರಮ~ ಮತ್ತು `ಸಮೃದ್ಧಿ~ಯ ಹಬ್ಬ. ಆದರೆ, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು, ಹಿಂಗಾರು ಹಂಗಾಮು ಸಹ ವಿಫಲವಾಗಿರುವುದರಿಂದ ರೈತಾಪಿ ಜನ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

`ವರವ ಕೊಡುವ ಲಕ್ಷ್ಮಿಯ ಹಬ್ಬ ಇದು~ ಎಂದು ಅವರೆಲ್ಲ ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಹಬ್ಬ ಆಚರಿಸುತ್ತಿದ್ದಾರೆ. ಸಾಲ ಮಾಡಿಯಾದರೂ ಸರಿ ಮಕ್ಕಳಿಗೆ ಹೊಸ ಬಟ್ಟೆ ತಂದು ತೊಡಿಸಿದರು. ಬೆಲೆ ಏರಿಕೆಯ ಬಿಸಿ, ಬರದ ನೋವಿನ ಮಧ್ಯೆಯೂ ಲಕ್ಷ್ಮಿಯನ್ನು ಪೂಜಿಸಿದರು.

ಅಮಾವಾಸ್ಯೆಯ ದಿನ ಬುಧವಾರ ಜಿಲ್ಲೆಯಲ್ಲಿ ದೀಪಾವಳಿಯ ಸಂಭ್ರಮ ಜೋರಾಗಿತ್ತು. ಮನೆ-ಅಂಗಡಿಗಳಿಗೆ ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಕಾರು, ಜೀಪ್, ಬೈಕ್ ಮತ್ತಿತರ ವಾಹನಗಳನ್ನು ತೊಳೆದು ಅವುಗಳಿಗೆ ಹೂವಿನಿಂದ ಅಲಂಕರಿಸಿ, ಕಬ್ಬು-ಬಾಳೆ ಕಟ್ಟಿ ಪೂಜೆ ಸಲ್ಲಿಸಲಾಯಿತು.

ಮನೆ ಮನೆಗಳಲ್ಲಿ; ಎಲ್ಲ ಅಂಗಡಿ-ಮುಂಗಟ್ಟುಗಳಲ್ಲಿ ಲಕ್ಷ್ಮಿ ಪೂಜೆಯ ವೈಭವ ಜೋರಾಗಿತ್ತು. ಲಕ್ಷ್ಮಿ ದೇವಿಗೆ ಎಲ್ಲರೂ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧಿಗಾಗಿ ಪ್ರಾರ್ಥಿಸಿದರು. ವರ್ತಕರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ, `ನಂದಾದೀಪ~ ಬೆಳಗಿಸಿದರು. ರಾತ್ರಿ ಇಡೀ ಜಾಗರಣೆ ಮಾಡಿದರು. ದೇವಿಯ ಎದುರು ಹಚ್ಚಿಟ್ಟ ದೀಪಗಳು ಉರಿಯುತ್ತಲೇ ಇರುವಂತೆ ನೋಡಿಕೊಂಡರು.

ಪ್ರತಿ ಬುಧವಾರ ವಿಜಾಪುರದಲ್ಲಿ ವ್ಯಾಪಾರ ವಹಿವಾಟಿಗೆ ರಜೆ ಇರುತ್ತದೆ. ಆದರೆ, ಈ ಬುಧವಾರ ವಿಜಾಪುರ ಮಾರುಕಟ್ಟೆ ಜನರಿಂದ ತುಂಬಿ ಹೋಗಿತ್ತು. ಬಹುತೇಕ ಅಂಗಡಿಗಳಲ್ಲಿ ಸಂಜೆಯವರೆಗೂ ವಹಿವಾಟು ಭರ್ಜರಿಯಾಗಿ ನಡೆಯಿತು.

ಇಲ್ಲಿಯ ಎಸ್.ಎಸ್. ರಸ್ತೆ, ಸರಾಫ್ ಬಜಾರ್ ಮತ್ತಿತರ ಸ್ಥಳಗಳಲ್ಲಿ ಹೂವು, ಹಣ್ಣು ಮತ್ತಿತರ ಪೂಜಾ ಉಪಕರಣಗಳ ಮಾರಾಟದ ಭರಾಟೆ ಹೆಚ್ಚಿತ್ತು. ಸಿದ್ಧೇಶ್ವರ, ಲಕ್ಷ್ಮಿ-ವೆಂಕಟೇಶ, ಈಶ್ವರಲಿಂಗ ಸೇರಿದಂತೆ ನಗರದ ಮಂದಿರಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಪಟಾಕಿಯ ಮಾರಾಟವೂ ಬಲು ಜೋರಾಗಿತ್ತು. ಅಲ್ಲಲ್ಲಿ ಸಿಡಿಯುತ್ತಿದ್ದ ಪಟಾಕಿಗಳು ಭಾರಿ ಶಬ್ದದೊಂದಿಗೆ ಬಾನೆತ್ತರಕ್ಕೆ ನೆಗೆದು ಬಣ್ಣದ ಚಿತ್ತಾರ ಮೂಡಿಸುತ್ತಿದ್ದವು. ಇನ್ನು ಮಕ್ಕಳು ಸುರ್‌ಸುರ್ ಕಡ್ಡಿಗಳನ್ನು ಕೈಯಲ್ಲಿ ಹಿಡಿದುಕೊಂಡು ಅವುಗಳನ್ನು ಬೆಳಗಿಸುತ್ತ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂತು.

`ದೀಪಾವಳಿ ಎಂದರೆ ದೀಪಗಳ ಸಾಲು. ದೀಪ ಹಚ್ಚುವುದರಿಂದ ಮನೆಗೆ ಶೋಭೆ. ಉತ್ಸಾಹ ಮತ್ತು ಆನಂದ ಇಮ್ಮಡಿಯಾಗುತ್ತದೆ. ವಿದ್ಯುತ್ ದೀಪಗಳ ಮಾಲೆ ಹಚ್ಚುವುದಕ್ಕಿಂತ ಎಣ್ಣೆ ಮತ್ತು ಬತ್ತಿಯ ಹಣತೆಗಳನ್ನು ಹಚ್ಚುವುದರಲ್ಲಿ ಹೆಚ್ಚಿನ ಶೋಭೆ ಮತ್ತು ಶಾಂತಿ ಇರುತ್ತದೆ~ ಎಂದು ಹೇಳುತ್ತ ಗೃಹಿಣಿಯರು ದೀಪಗಳನ್ನು ಬೆಳಗಿಸಿದರು.

ಕಾರ್ತಿಕೋತ್ಸವ ಇಂದಿನಿಂದ: ಇಲ್ಲಿಯ ಬಿಎಲ್‌ಡಿಇ ಸಂಸ್ಥೆಯ ವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ಸಿದ್ಧಿವಿನಾಯಕ ಮಂದಿರದಲ್ಲಿ ಇದೇ 27ರಿಂದ ಕಾರ್ತಿಕ ದೀಪೋತ್ಸವ ನಡೆಯಲಿದೆ. ಕಾರ್ತಿಕ ಮಾಸದ ಒಂದು ತಿಂಗಳ ಕಾಲ ನಿತ್ಯ ಸಂಜೆ ನಿರಂತರ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಲಾಗಿದೆ.

ಅಡ್ವಾಣಿ ರಥಯಾತ್ರೆಗೆ ವಿಜಾಪುರ ಕಾರ್ಯಕರ್ತರು
ವಿಜಾಪುರ:
ಬಿ.ಜೆ.ಪಿ. ನಾಯಕ ಲಾಲ್‌ಕೃಷ್ಣ ಅಡ್ವಾಣಿ ಹಮ್ಮಿಕೊಂಡಿರುವ ಜನ ಚೇತನ ಯಾತ್ರೆ ಇದೇ 30ರಂದು ಬೆಂಗಳೂರಿಗೆ ಆಗಮಿಸಲಿದ್ದು, ಜಿಲ್ಲೆಯ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಕಲ್ಲೂರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಜೆ 5ಕ್ಕೆ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಂದು ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.