ADVERTISEMENT

ಬಿಜೆಪಿ ಸೇರಿದವರಿಗೆ ಯಾವುದೇ ಭರವಸೆ ನೀಡಿಲ್ಲ: ಬೆಳ್ಳುಬ್ಬಿ

ಲಿಂಗಾಯತ ಧರ್ಮ ಕಾಂಗ್ರೆಸ್ ಗಿಮಿಕ್: ಟೀಕೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 5:17 IST
Last Updated 29 ಮಾರ್ಚ್ 2018, 5:17 IST

ಬಸವನಬಾಗೇವಾಡಿ: ‘ಬೇರೆ, ಬೇರೆ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಆದರೆ ಪಕ್ಷ ಯಾರಿಗೂ ಯಾವುದೇ ಭರವಸೆ ನೀಡಿಲ್ಲ‘ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಪಕ್ಷದಲ್ಲಿ 9 ವರ್ಷದಿಂದ ಜಿಲ್ಲಾ ಘಟಕದ ಅಧ್ಯಕ್ಷನಾಗಿ, ಎರಡು ಬಾರಿ ಶಾಸಕ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಪಕ್ಷದ ಮೇಲೆ ನನಗೆ ಅಪಾರ ನಂಬಿಕೆ ಇದೆ’ ಎಂದರು.

ಲಿಂಗಾಯತ ಧರ್ಮದ ವಿಚಾರವಾಗಿ ಪ್ರಶ್ನಿಸಿದಾಗ, ‘ಲಿಂಗಾಯತ ಧರ್ಮದ ವಿಚಾರ ಕಾಂಗ್ರೆಸ್‌ನ ಒಂದು ಗಿಮಿಕ್ ಅಷ್ಟೆ. ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್‌ ಕುತಂತ್ರ ಇದು. ರಾಜ್ಯದ ಜನತೆ ಸಾಕಷ್ಟು ಪ್ರಜ್ಞಾವಂತರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ADVERTISEMENT

‘ಬೆಂಗಳೂರಿನಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ಆರಂಭಿಸಿ ನಾವು ಹಸಿವು ಮುಕ್ತ ರಾಜ್ಯ ಮಾಡಿದ್ದೇವೆ ಎನ್ನುವ ಸಿದ್ದರಾಮಯ್ಯನವರ ಮಾತು ಸರಿಯಾಗಿದೆಯಾ’ ಎಂದೂ ಪ್ರಶ್ನಿಸಿದರು.

‘ನಾನು ವ್ಯಕ್ತಿ ಪರ ಅಲ್ಲ, ಪಕ್ಷದ ಪರ’

ಬಸವನಬಾಗೇವಾಡಿ: ‘ಪಕ್ಷಕ್ಕೆ ಯಾರೂ ಬೇಕಾದರು ಸೇರ್ಪಡೆಗೊಳ್ಳಬಹುದು, ಸೇರ್ಪಡೆಯಾಗಿದ್ದಾರೆ ಎಂಬ ಮಾತ್ರಕ್ಕೆ ಅವರೇ ಪಕ್ಷದ ಅಭ್ಯರ್ಥಿ ಅಂತ ಹೇಳುವುದು ಸರಿ ಅಲ್ಲ. ಪಕ್ಷ ಯಾರಿಗೂ ಯಾವುದೇ ಭರವಸೆ ನೀಡಿಲ್ಲ. ನಾನು ಯಾವಾಗಲೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಹೂರತು ವ್ಯಕ್ತಿಯ ಪರವಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ (ಕೂಚಬಾಳ) ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಬಾರಿ ಮುದ್ದೇಬಿಹಾಳದಲ್ಲಿ ಕಾಂಗ್ರೆಸ್ ಭಾರಿ ಬಹುಮತಗಳಿಂದೆನೂ ಗೆದ್ದಿಲ್ಲ. ನಮ್ಮ ಪಕ್ಷದ ಒಳ ಜಗಳದಿಂದ ಕಾಂಗ್ರೆಸ್ಸಿಗೆ ಗೆಲುವಾಯಿತೇ ಹೂರತು ಅವರ ಸ್ವಂತ ಬಲದಿಂದ ಅಲ್ಲ. ಕಳೆದ ಬಾರಿ ನಡೆದ ತಪ್ಪು ಈ ಬಾರಿ ಮರುಕಳಿಸುವುದಿಲ್ಲ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಸರಿ. ನಾವು ಒಟ್ಟಾಗಿ ಪಕ್ಷದ ಪರವಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸುತ್ತೇವೆ’ ಎಂದು ಹೇಳಿದರು.

‘ಹೊಸದಾಗಿ ಬಂದವರಿಗೆ ಪಕ್ಷ ಮಣೆ ಹಾಕುವುದಿಲ್ಲ ಎನ್ನುವ ನಂಬಿಕೆ ಇದೆ. ಪಕ್ಷ ಯಾವುದೇ ನಿರ್ಣಯ ತೆಗೆದುಕೊಂಡರೂ ಪಕ್ಷಕ್ಕೆ ಬದ್ದನಾಗಿರುತ್ತೆನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.