ADVERTISEMENT

ಬೆಳಗಾವಿ ಮೇಯರ್ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2011, 5:40 IST
Last Updated 4 ನವೆಂಬರ್ 2011, 5:40 IST
ಬೆಳಗಾವಿ ಮೇಯರ್ ಪ್ರತಿಕೃತಿ ದಹನ
ಬೆಳಗಾವಿ ಮೇಯರ್ ಪ್ರತಿಕೃತಿ ದಹನ   

ವಿಜಾಪುರ: ಕರ್ನಾಟಕ ರಾಜ್ಯೋತ್ಸವದ ಬದಲು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯವರು ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿಯ ಗಾಂಧಿ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿ, ಬೆಳಗಾವಿಯ ಮೇಯರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಲ್ಲರೂ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಬೆಳಗಾವಿಯ ಮೇಯರ್ ಎಂ.ಇ.ಎಸ್. ಜೊತೆಗೂಡಿ ಕಪ್ಪು ಬಟ್ಟೆ ಧರಿಸಿ ಕರ್ನಾಟಕದ ವಿರುದ್ಧ ಘೋಷಣೆ ಕೂಗುವ ಮೂಲಕ ರಾಜದ್ರೋಹ ವೆಸಗಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿಯ ಮೇಯರ್‌ನ್ನು ವಜಾಗೊಳಿಸಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದು ಪಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಶೇಷರಾವ ಮಾನೆ ಎಚ್ಚರಿಸಿದರು.

ಮುಖಂಡರಾದ ಸಂಜೀವ ಕರ್ಪೂರಮಠ, ರೇಷ್ಮಾ ಪಡೇಕನೂರ, ಸುರೇಶ ವಿಜಾಪುರ, ಎಂ.ಸಿ. ಮುಲ್ಲಾ, ಅನುರಾಧಾ ಕಲಾಲ, ಅನಿತಾ ಜಾಲವಾದಿ, ದಸ್ತಗೀರ ಸಾಲೋಟಗಿ, ಮೌನೇಶ ಬಡಿಗೇರ, ಮಲ್ಲು ಮಡಿವಾಳ, ಶ್ರೀದೇವಿ ಬಡಿಗೇರ, ಲಲಿತಾ ಮೊಟಗಿ ಇತರರು ಪಾಲ್ಗೊಂಡಿದ್ದರು.

ಸಿಂದಗಿಯಲ್ಲಿ: ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದ ಮಹಾನಗರಪಾಲಿಕೆ ಮೇಯರ್ ಮಂದಾ ಬಾಳೆಕುಂದ್ರಿ ಅವರ ಕೃತ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಮೇಯರ್ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರವೇ ಉತ್ತರ ಕರ್ನಾಟಕ ವಲಯದ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಕಾರ್ಯಾಧ್ಯಕ್ಷ ಸಿದ್ದು ಬುಳ್ಳಾ ಮಾತನಾಡಿ, ಬೆಳಗಾವಿ ಎಂ.ಇ.ಎಸ್ ಸಂಘಟನೆ ಅಟ್ಟಹಾಸ ಮೆರೆಯುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಎಂ.ಇ.ಎಸ್ ಕಾರ್ಯಕರ್ತರನ್ನು ರಾಜ್ಯ ಬಿಟ್ಟು ಓಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೇಯರ್ ಮಂದಾ ಬಾಳೆಕುಂದ್ರಿ ನಾಡದೇವಿ ಭುವನೇಶ್ವರಿ ಮೆರವಣಿಗೆ ಸಂದರ್ಭದಲ್ಲಿ ಕಟ್ಟು ಬಾವುಟ ಪ್ರದರ್ಶನ ಮಾಡಿರುವುದು ನಾಡದ್ರೋಹದ ಕಾರ್ಯವಾಗಿದೆ. ಹೀಗಾಗಿ ಅವರನ್ನು ಕೂಡಲೇ ಗಡಿಪಾರು ಮಾಡಿ ಮಹಾನಗರಪಾಲಿಕೆಯನ್ನು ವಿಸರ್ಜಿಸಬೇಕು ಎಂದು ಅವರು ಆಗ್ರಹಪಡಿಸಿದರು.

ಕರವೇ ನಗರ ಘಟಕ ಅಧ್ಯಕ್ಷ ತನ್ವೀರ ಭೈರಾಮಡಗಿ, ಸಿದ್ದು ಅಗಸರ, ಫಾರೂಕ ಮುಲ್ಲಾ, ರಾಜೂ ಮದರಖಾನಿ, ಮಹಿಬೂಬ ಆಳಂದ, ಮಡಿವಾಳಪ್ಪ ವಾಲಿಕಾರ, ಮಹಿಬೂಬ ನಾಗಾವಿ, ಮೈಬೂಬ ಮುಲ್ಲಾ, ಸುನೀಲ ಬಡಿಗೇರ, ನಾಗರಾಜ ಮಳ್ಳಿ, ನಿಂಗೂ ಸಾವಳಸಂಗ, ಸಿದ್ದಣ್ಣ ಚೌಧರಿ, ಸಂತೋಷ ಮ್ಯಾಗೇರಿ, ರವಿಕಾಂತ ಪಾಟೀಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ ಅಶೋಕ ದುಡಗುಂಟಿ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.