ತಾಳಿಕೋಟೆ: ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಗುರುವಾರ ಮಳೆಯ ಅಬ್ಬರ ಜೋರಾಗಿತ್ತು. ಮಧ್ಯಾಹ್ನ 12ಗಂಟೆಯ ಸುಮಾರಿಗೆ ಆರಂಭಗೊಂಡು ಎರಡು ಗಂಟೆಗೂ ಅಧಿಕ ಕಾಲ ಅಬ್ಬರದಿಂದ ಸುರಿದ ಪರಿಣಾಮವಾಗಿ ಜಮೀನುಗಳೆಲ್ಲ ಕೆರೆಗಳಾಗಿ ಪರಿವರ್ತನೆಗೊಂಡವು.ಹೆಚ್ಚಿನೆಡೆ ಒಡ್ಡು-ವಾರಿಗಳು ಒಡೆದುಹೋಗಿ ಅಪಾರಪ್ರಮಾಣದ ಫಲವತ್ತಾದ ಮಣ್ಣು ಹಳ್ಳಕ್ಕೆ ಸೇರಿ ಹೋಯಿತು. ಬಿತ್ತನೆಗೆ ಯೋಗ್ಯ ಮಳೆ ಬಂದದ್ದಕ್ಕೆ ಸಂತಸ ಪಟ್ಟ ರೈತ ಒಡ್ಡು-ವಾರಿ ಒಡೆದುಹೋದುದಕ್ಕೆ ಆತಂಕ ಪಡುವಂತಾಯಿತು.
ಪಟ್ಟಣದಿಂದ ಮುದ್ದೇಬಿಹಾಳಕ್ಕೆ ಹೋಗುವ ಮಾರ್ಗದಲ್ಲಿ ಜಮ್ಮಲದಿನ್ನಿಯವರೆಗೆ ಭಾರಿ ಪ್ರಮಾಣದ ಮಳೆ ಸುರಿಯಿತು, ಇದರಿಂದಾಗಿ ದೇವರಹುಗಬಾಳ ಮತ್ತು ಮೂಕಿಹಾಳ ಮಧ್ಯದಲ್ಲಿರುವ ಹಳ್ಳಕ್ಕೆ ನಿರ್ಮಿಸಿದ ಹೂಳು ತಡೆಯುವ ತಡೆಗೋಡೆ ಪಕ್ಕದ ಮಣ್ಣಿನ ಒಡ್ಡುಗಳ ಮೇಲೆ ಪ್ರವಾಹದ ನೀರು ಹರಿದು ಒಡ್ಡುಗಳೆಲ್ಲ ಒಡೆದು ಹೋದವು.
ಡೋಣಿ ನದಿ ತಟದಲ್ಲಿರುವ ಸಜ್ಜನ ಅವರ ತಾಳೆ ತೋಟ ಜಲಾವೃತವಾಗಿತ್ತು. ಮೂಕಿಹಾಳ ಬಳಿಯ ಸೋಗಲಿ ಹಳ್ಳದ ದಂಡೆಯಲ್ಲಿರುವ ಜಮೀನಿಗೆ ಅಡ್ಡಲಾಗಿ ನಿರ್ಮಿಸಿದ್ದ ಸಡಿಲ ಕಲ್ಲಿನ ಗೋಡೆ ಪಕ್ಕದಲ್ಲಿದಾರಿ ಮಾಡಿಕೊಂಡ ಮಳೆಯ ನೀರಿನ ಪ್ರವಾಹ ಅಲ್ಲಿದ್ದ ಬ್ರಹತ್ ಬೇವಿನಮರವನ್ನು ನೆಲಕ್ಕುರುಳಿಸಿದೆ. ಪಟ್ಟಣದಲ್ಲಿ ಬುಧವಾರ ರಾತ್ರಿಯಿಂದ ಗುರುವಾರದ ಬೆಳಿಗ್ಗೆ 9ಗಂಟೆಯವರೆಗೂ ವಿದ್ಯುತ್ ನಿಲುಗಡೆಯಾಗಿ ಜನರು ಪರದಾಡಿದರು. ವಿದ್ಯುತ್ ಇಲ್ಲದೆ ಜನ ಕತ್ತಲಲ್ಲಿ ಕಾಲ ಕಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.