ADVERTISEMENT

ಮಾಸ್ಟರ್ ಪ್ಲಾನ್ ಪರಿಹಾರಕ್ಕೆ ರೂ.23 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 5:35 IST
Last Updated 7 ಜನವರಿ 2012, 5:35 IST

ವಿಜಾಪುರ: `ನಗರದಲ್ಲಿ ಮಾಸ್ಟರ್ ಪ್ಲಾನ್ ಜಾರಿಯಿಂದ ಆಸ್ತಿ ಕಳೆದುಕೊಳ್ಳುವ ಮಾಲೀಕರಿಗೆ ಪರಿಹಾರ ನೀಡಲು 23 ಕೋಟಿ ರೂಪಾಯಿ ಕಾಯ್ದಿರಿಸಲಾಗಿದ್ದು, ವಾರದಲ್ಲಿ ಈ ಹಣ ಬಿಡುಗಡೆಯಾಗಲಿದೆ~ ಎಂದು ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ ತಿಳಿಸಿದ್ದಾರೆ.

ವಿಜಾಪುರ ನಗರಸಭೆಗೆ ಮಂಜೂರಾಗಿರುವ ಮುಖ್ಯಮಂತ್ರಿಗಳ ನಗರೋತ್ಥಾನ ಅಭಿವೃದ್ಧಿ ಯೋಜನೆಯಲ್ಲಿ ಮಾಸ್ಟರ್ ಪ್ಲಾನ್‌ಗೆ ಪರಿಹಾರ ನೀಡಲು 23 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಇದರ ಮಂಜೂರಾತಿಗಾಗಿ ಸರ್ಕಾರಕ್ಕೆ ಪಸ್ತಾವ ಸಲ್ಲಿಸಲಾಗಿದೆ. ತಕ್ಷಣ ಹಣ ಬಿಡುಗಡೆಗೆ ಸರ್ಕಾರದೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಐತಿಹಾಸಿಕ ವಿಜಾಪುರ ನಗರದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೆ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ ಎಂದಿದ್ದಾರೆ.

ನಗರದ ಪ್ರಮುಖ ರಸ್ತೆಯಾದ ಕೆ.ಎಸ್.ಆರ್.ಟಿ.ಸಿ. ಬಸ್ ಘಟಕದಿಂದ ಮಹಾತ್ಮಗಾಂಧಿ ಚೌಕ್ ಮಾರ್ಗವಾಗಿ ರೈಲ್ವೆ ನಿಲ್ದಾಣದ ಮೇಲ್ಸೇತುವೆ ವರೆಗೆ ಮಾಸ್ಟರ್ ಪ್ಲಾನ್ ಜಾರಿಗೊಳಿಸಲು ಪ್ರಾಥಮಿಕವಾಗಿ ನಿರ್ಧರಿಸಲಾಗಿದೆ. ಪರಿಹಾರಕ್ಕೆ ಹಣ ಕಾಯ್ದಿಸಿದ್ದರಿಂದ ಈ ರಸ್ತೆಗೆ ಹೊಂದಿಕೊಂಡು ಇರುವ ಬಾಧಿತ ಆಸ್ತಿಗಳ ಮಾಲೀಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಈ ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡಿದ್ದಾರೆ. ಮಾಸ್ಟರ್ ಪ್ಲಾನ್ ಅನುಷ್ಠಾನದಲ್ಲಿ ಆಸ್ತಿಗಳನ್ನು ಕಳೆದುಕೊಳ್ಳುವ ಮಾಲೀಕರು ಸಹ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕರಿಸಬೇಕು ಎಂದು ರಜಪೂತ ಮನವಿ ಮಾಡಿದ್ದಾರೆ.

ಬೀಳ್ಕೊಡುಗೆ: ವಿಜಾಪುರದ ಬಿ.ಎಸ್.ಎನ್.ಎಲ್. ಕಚೇರಿಯ ನಿವೃತ್ತ ನೌಕರ ಭಾಸ್ಕರ ಹಣಗಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಮಹಾ ಪ್ರಬಂಧಕ ಎಸ್.ಎಸ್. ಸಿಂದಗಿ ಅವರು ನಿವೃತ್ತ ನೌಕರ ಭಾಸ್ಕರ ಹಣಗಿ ಅವರನ್ನು ಸನ್ಮಾನಿಸಿದರು. ಗಂಗಾಧರ ಸಾಲಕ್ಕಿ, ಉದಯ ಸಿಂದಗಿ, ಬಿ.ಸಿ. ಹಚ್ಯಾಳ, ಎಂ.ಜಿ. ಖುರೇಷಿ, ಬಿ.ಎಂ. ಚಲವಾದಿ, ಎ.ಎಲ್. ಪಾಟೀಲ, ವಿ.ಕೆ. ಮಾಹುಲಿ, ಸುರೇಶ ಬಿರಾದಾರ, ಚಂದ್ರಶೇಖರ, ಡಿ.ಬಿ. ಮಠ, ಸದಾನಂದ ಹೊಕ್ರಾಣಿ, ಎ.ಎಂ. ಸಾರವಾಡ, ಎಂ.ಜಿ. ಅಂಬಿ, ವೈ.ಟಿ. ಸುಳಕೋಡ, ಎ.ಆರ್. ಇನಾಮದಾರ ಮತ್ತಿತರರಿದ್ದರು.
ಕಲ್ಯಾಣರಾವ್ ದೇಶಪಾಂಡೆ ಪ್ರಾರ್ಥಿಸಿದರು. ಎನ್.ವೈ. ಹೊಳೆಪ್ಪಗೋಳ ಸ್ವಾಗತಿಸಿದರು. ರಾಜಶೇಖರ ಕಲ್ಮಠ ನಿರೂಪಿಸಿದರು. ಕಿರಣ್ ಕೊಂಡಗೂಳಿ ವಂದಿಸಿದರು.

ಶಾಲೆಯಲ್ಲಿ ಸ್ಪರ್ಧೆ: ವಿಜಾಪುರದ ದೌಲತ್‌ಕೋಟೆಯ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷಣ ಸ್ಪರ್ಧೆ ನಡೆಯಿತು.

ಭಾಷಣ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳಾದ ರಿಜ್ವಾನ, ಅಲಿಅಬ್ಬಾಸ, ಗಂಗಾವತಿ, ಶಹಬಾಜ, ಶಾಹೀದ್ ಮತ್ತು ಆಸಿಫ್ ಬಹುಮಾನ ಪಡೆದರು. ಉರ್ದು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಣೂರ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಎಫ್.ಎನ್. ಮಿರ್ಜಾ,  ಗುಂದಗಿ, ಅವಟಿ, ಬಿ.ಎಂ. ಮುಜಾವರ, ಎಂ.ಎ. ಬಗಲಿಪಟೇಲ, ಕಿರಣ್ ವಸ್ತ್ರದ, ಎನ್.ಎ. ಮಿರ್ಜಾ, ಎನ್.ಜೆ. ಇಲಕಲ್, ಎ.ಎಲ್. ಚೋರಗಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.