ADVERTISEMENT

ಮುಖ್ಯ ರಸ್ತೆಯಲ್ಲಿಯೇ ಹರಿಯುವ ಕಕ್ಕಸ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 5:50 IST
Last Updated 9 ಅಕ್ಟೋಬರ್ 2011, 5:50 IST

ಸಿಂದಗಿ: ಹಳೇ ಪಟ್ಟಣದ ನೀಲಗಂಗಾದೇವಿ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಒಂದು ವರ್ಷದಿಂದ ಕಕ್ಕಸ ನೀರು ಹರಿಯುವುದು ಸಾಮಾನ್ಯವಾಗಿದೆ.

ಸುಮಾರು ಹತ್ತಾರು ಲಕ್ಷ ವೆಚ್ಚದ ಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದರಿಂದ ಒಳಚರಂಡಿ ಚೇಂಬರ್ ತುಂಬಿಕೊಂಡು ರಸ್ತೆಯಲ್ಲಿಯೇ ಕಕ್ಕಸ ಹರಿಯುವ ಮೂಲಕ ಈ ಭಾಗದ ನಿವಾಸಿಗಳು ದುರ್ಗಂಧದಿಂದಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಈ ಕಾಮಗಾರಿಯನ್ನು ಗುತ್ತಿಗೆದಾರರ ಹೆಸರಿನಲ್ಲಿ ಇಬ್ಬರು ಪುರಸಭೆ ಸದಸ್ಯರೇ ಕೈಗೆತ್ತಿಕೊಂಡಿದ್ದರು. ಈಗ ಈ ರಸ್ತೆ ಅನಾಥ ರಸ್ತೆಯಾಗಿದೆ. ಯಾರೂ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಈ ರಸ್ತೆ ಪುರಸಭೆಗೆ ಸಂಬಂಧಿಸಿದ್ದು ಹೌದೋ...ಅಲ್ಲವೋ ಎಂಬ ಸಂಶಯ ಉಂಟಾಗುತ್ತಿದೆ.

ಪಟ್ಟಣದ ಯಾವುದೇ ಮೆರವಣಿಗೆ, ಶವಯಾತ್ರೆ ಎಲ್ಲ ಇದೇ ರಸ್ತೆಯಿಂದಲೇ ಸಾಗಬೇಕು. ಇ್ಲ್ಲಲಿ ಕಾಲಿಡಲು ಜನ ಹಿಂದೇಟು ಹಾಕುವಷ್ಟು ಕಕ್ಕಸದ ಹಳ್ಳವಾಗಿ ಪರಿವರ್ತನೆಯಾಗಿದೆ. ಇದೇ ರಸ್ತೆಯಲ್ಲಿಯೇ ಸುಪ್ರಸಿದ್ದ ನೀಲಗಂಗಾದೇವಿ ದೇವಸ್ಥಾನವಿದೆ. ದೇವಸ್ಥಾನದ ಬಾಗಿಲಿಗೆ ಕಕ್ಕಸ ನೀರು ನಿಂತುಕೊಂಡಿರುತ್ತದೆ. ಭಕ್ತಾಧಿಗಳು ಪುರಸಭೆಗೆ ಶಪಿಸುತ್ತ ಮೂಗು ಮುಚ್ಚಿ ದೇವರ ದರ್ಶನಕ್ಕೆ ತೆರಳುವ ಪರಿಸ್ಥಿತಿ ನಿತ್ಯ ಕಂಡು ಬರುವ ಸನ್ನಿವೇಶ. ಈ ಕುರಿತು ಈ ಭಾಗದ ಜನರು ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಒಂದೂವರೆ ವರ್ಷದಿಂದ ಈ ರಸ್ತೆಗೆ ಮಂಜೂರಾದ ಕಾಂಕ್ರೀಟ್ ರಸ್ತೆ ಕೂಡ ತಡೆ ಹಿಡಿಯಲ್ಪಟ್ಟಿದೆ.

ಇನ್ನೊಮ್ಮೆ ಒಳಚರಂಡಿ ಕಾಮಗಾರಿ ಆಗಬೇಕು. ಪುರಸಭೆಗೆ ನೂತನ ಮುಖ್ಯಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಎನ್. ಆರ್. ಮಠ ಅವರಿಂದಲಾದರೂ ಈ ರಸ್ತೆಯ ಒಳಚರಂಡಿಗೆ ಮುಕ್ತಿ ಸಿಗಬಹುದೇನೋ ಎಂಬುದು ಇಲ್ಲಿಯ ನಿವಾಸಿಗಳ ನಿರೀಕ್ಷೆಯಾಗಿದೆ.

ಕೂಡಲೇ ಈ ಬಗ್ಗೆ ಕ್ರಮ ಜರುಗಿಸದೇ ಇದ್ದಲ್ಲಿ ಸಂಪೂರ್ಣ ಸಿಂದಗಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ ಎಂದು ನೀಲಗಂಗಾದೇವಿ ದೇವಸ್ಥಾನದ ಧರ್ಮದರ್ಶಿ ಶಿರೂಗೌಡ ದೇವರಮನಿ, ದಯಾನಂದ ಪತ್ತಾರ, ಮಲ್ಲೂ ಲೋಣಿ, ರಾಜೂ ಭೈರಿ ಮುಂತಾದವರು ಎಚ್ಚರಿಕೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.