ADVERTISEMENT

ಮೊದ್ಲ ಮುಂದ್‌ ಇದ್ದಿದ್ಕ ಗಾಬರಿ ಆಗಿತ್ತು...

ಸೈನಿಕ ಶಾಲೆ ಆವರಣ: ಮುನ್ನಡೆ–ಹಿನ್ನಡೆಗೆ ಕಾರ್ಯಕರ್ತರ ಗಾಬರಿ; ಕ್ಷಣ ಕ್ಷಣಕ್ಕೂ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 16 ಮೇ 2018, 9:29 IST
Last Updated 16 ಮೇ 2018, 9:29 IST

ವಿಜಯಪುರ: ಮಾವ ನಮ್ಮ ಕ್ಯಾಂಡೆಟ್‌ ಗೆಲ್ಲುವುದು ಗ್ಯಾರಂಟಿ. ಎಣ್ಣಾ ಮುಂದಿನ ರೌಂಡ್‌ನ್ಯಾಗ ನಮ್ಮ ಗಡಿ ಲೀಡ್‌ ಆಗ್ತಾನಾ, ಈ ಊರಾಗ ಅವರಿಗೆ ಜಾಸ್ತಿ ಓಟ್‌ ಬಂದ್ರೆ, ನಮ್ಮ ಏರಿಯಾ ಡಬ್ಬಿ ಬರ್ಲಿ ನಮ್ದ್‌ ಬಾರಿ ಮುಂದ್‌ ಆಗ್ತಾದ, ದೋಸ್ತ್‌ ನಾವ್‌ ಅಂದುಕೊಂಡಂಗೆ ನಮ್ಮ ಅಭ್ಯರ್ಥಿ ಗೆದ್ದ...

ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿರುವ ನಗರದ ಸೈನಿಕ ಶಾಲೆ ಎದುರು ಶನಿವಾರ ಬೀರು ಬಿಸಿಲು ಲೆಕ್ಕಿಸದೇ ಜಮಾಯಿಸಿದ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲು, ಗೆಲುವು, ಹಿನ್ನಡೆ, ಮುನ್ನಡೆ ಕುರಿತು ಹೀಗೆ ಮಾತನಾಡಿಕೊಳ್ಳುತ್ತಿದ್ದರು.

ಸೋಮನಗೌಡ್ರು ಮೊದಲಿಂದ ಕೊನೆಯವರೆಗೂ ಮುನ್ನಡೆ ಸಾಧಿಸುತ್ತ ಬಂದಾರಿ. ಆದ್ರೆ ಜೆಡಿಎಸ್‌ ಅಭ್ಯರ್ಥಿ ಆಗಾಗ ಪೈಪೋಟಿ ಒಡ್ಡುತ್ತಿರುವುದು ನೋಡಿ ತುಂಬಾ ಗಾಬರಿ ಆಗ್ತಿತ್ತು. 15ನೇ ರೌಂಡಲಂತೂ ಬರೀ 90 ಮತ ಮಾತ್ರ ಮುಂದಿದ್ದರಿಂದ ನಮ್ಮ ಅಭ್ಯರ್ಥಿಗೆ ಹಿನ್ನಡೆ ಆಗುತ್ತದೆ ಎಂಬ ಭಯ ಆರಂಭಗೊಂಡಿತ್ತು. ಆದ್ರೆ ಹಂತ ಹಂತವಾಗಿ ಮುನ್ನಡೆ ಪಡೆಯುತ್ತಿರುವುದು ನೋಡಿದ್ರ ನಾವ್‌ ಗೆಲ್ತೇವ್ರಿ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಶಿವಾನಂದ ತಾಳಿಕೋಟಿ, ಮಲ್ಲಯ್ಯ ಗಣಿಮಠ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಬಿಜೆಪಿ ಕ್ಯಾಂಡಿಡೇಟ್‌ ಮೊದಲ ರೌಂಡ್‌ನ್ಯಾಗ ಮುಂದ್‌ ಇದ್ನತ್ರಿ. ಅವಾಗ ನಮ್ಗ ಬಾಳ ಗಾಬ್ರಿ ಆಗಿತ್ತು. ನಮ್ಮ ಮಾವ ಇವಾಗ ಪೋನ್‌ ಮಾಡಿ ಹೇಳ್ಯಾನ್ರಿ ಮನಗೂಳಿ ಅವ್ರು ಮುಂದ ಅದಾರ ಅಂತ. ನಮ್ಮ ಅಭ್ಯರ್ಥಿ ಗೆಲ್ತಾನ ಅಂತ ವಿಶ್ವಾಸ ಐತಿ. ಆದ್ರ ಏನಾಗುತೈತಿ ನೀಡಬೇಕ್ರಿ. ಹೋದ ಇಲೆಕ್ಷ್ಯಾನ್‌ದಾಗ ಗೆದ್ದಾರಂತ ಹೇಳಿದ್ರು. ಹಿಂದಾಗಡಿ ಸೋತ್ರು ಅಂತ ಸುದ್ದಿ ಬಂತು. ಈ ಸಾರಿ ಹಂಗ ಆಗಬಾರ್ದು ಅಂತ ದೇವರಲ್ಲಿ ಕೇಳ್ಕೋತೀನಿ ಎಂದು ಸಿಂದಗಿ ಮತಕ್ಷೇತ್ರದ ಜೆಡಿಎಸ್‌ ಯುವ ಮುಖಂಡ ದರೇಪ್ಪ ಬಿರಾದಾರ, ಸಂತೋಷ ಬಿರಾದಾರ ಪ್ರಾರ್ಥಿಸಿದರು.

ಚುನಾವಣೆ ಆದ ಮೇಲ್ ಓಟಿಂಗ್‌ ಬಾಳ ಆಗ್ಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಗೆಲ್ತಾರ ಅಂತ ಜನ್ರು ಹೇಳುದನ್ನ ಕೇಳಿ ಬಾಳ ಭಯ ಆಗಿತ್ತು. ಆದ್ರ ಇವತ್ತು ಮೊದಲಿಂದಲೇ ಗೌಡ್ರು ಬಾರಿ ಮುಂದ ಅದಾರಿ ಏನು ಇಲ್ಲಂದ್ರು ಇಪ್ಪತ್ತು ಸಾವಿರ ಹೋಟ್ಲೆ ಹಾರಿಸಿ ಬರ್ತಾರ. ವಿಜಯೋತ್ಸವಕ್ಕೆ ಎಲ್ಲ ತಯಾರಿ ಮಾಡ್ಕೋಂಡಿವಿ. ಗೆದ್ದಿದ್ದು ಅನೌನ್ಸ್‌ ಮಾಡ್ಲಿ ಅಂತ ನಿತ್ತೇವಿ ಎಂದು ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತ ಆನಂದ ಹದರಿ ಹದರಿ ತಮ್ಮ ಅಭ್ಯರ್ಥಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.