ADVERTISEMENT

ಯಂತ್ರದಿಂದ ಕಾಮಗಾರಿ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 9:10 IST
Last Updated 24 ಮಾರ್ಚ್ 2011, 9:10 IST

ಸಿಂದಗಿ: ತಾಲ್ಲೂಕಿನ ಮೋರಟಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನು ಕೂಲಿಕಾರರಿಂದ ಮಾಡಿಸದೇ ಯಂತ್ರಗಳ ಮೂಲಕ ಮಾಡಿಸಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ಜೆಡಿಎಸ್ ಘಟಕ ಅಧ್ಯಕ್ಷ ಬಂದೇನವಾಜ ಕಣ್ಣಿ, ಬಿಜೆಪಿ ಘಟಕ ಅಧ್ಯಕ್ಷ ಎನ್.ಸಿ. ಶಾಬಾದಿ, ಮಂಡಲ ಪಂಚಾಯತಿ ಮಾಜಿ ಉಪಾಧ್ಯಕ್ಷ ಬಿ.ಆರ್. ಕೆರಿಗೊಂಡ, ದಲಿತ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಪಿ.ಎಸ್. ಮಾದರ, ರೈತ ಸಂಘದ ಅಧ್ಯಕ್ಷ ಸಿ.ಎ. ಕುಂಬಾರ, ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಅಧ್ಯಕ್ಷ ಪಿ.ಬಿ.ತುಪ್ಪದ, ಎ.ಎಸ್. ವಾಲಿಕಾರ, ಎಂ.ಡಿ.ಭಾಸಗಿ, ಎಚ್.ಕೆ. ದೇಸುಣಗಿ, ಗ್ರಾಪಂ ಮಾಜಿ ಸದಸ್ಯ ಎಚ್.ಎಂ. ಮಧರಿ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

2010-11ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೇ ಕೇವಲ ದಾಖಲಾತಿಗಳಲ್ಲಿ ಕಾಮಗಾರಿಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ಎತ್ತಿ ಹಾಕಿದ್ದಾರೆ.

ಈ ಯೋಜನೆಯ ಅನುದಾನ ಎತ್ತಿ ಹಾಕಲು ಯಾರದೋ ಕೂಲಿಕಾರರ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಠಿ ಮಾಡಿದ್ದಾರೆ. ಕೇವಲ ಒಂದೆರಡು ಕಾಮಗಾರಿ ಕೈಗೆತ್ತಿಕೊಂಡು ಅದೂ ಕೂಡ ಯಂತ್ರಗಳ ಮೂಲಕ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಈ ಅವ್ಯವಹಾರದಲ್ಲಿ ಭಾಗಿಗಳಾದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಜರುಗಿಸುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.