ADVERTISEMENT

ಯತ್ನಾಳ ಬಿಜೆಪಿ ಸೇರ್ಪಡೆಗಾಗಿ ಪಾದಯಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 4:17 IST
Last Updated 5 ಮಾರ್ಚ್ 2018, 4:17 IST

ಮುದ್ದೇಬಿಹಾಳ: ವಿಧಾನ ಪರಿಷತ್ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಆದಷ್ಟು ಬೇಗ ಬಿಜೆಪಿಗೆ ಸೇರಿಸಿಕೊಂಡು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಮಾ.6ರಂದು ಮುದ್ದೇಬಿಹಾಳದಿಂದ ವಿಜಯಪುರದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಯತ್ನಾಳ ಅಭಿಮಾನಿ ಬಳಗದ ಮುಖಂಡರಾದ ಉದಯ ರಾಯಚೂರ, ರಾಜಶೇಖರ ಹೊಳಿ ತಿಳಿಸಿದರು.

ಅಂದು ಬೆಳಿಗ್ಗೆ ಇಲ್ಲಿನ ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ. ಬಸರಕೋಡ, ಬಸವನ ಬಾಗೇವಾಡಿ, ಮನಗೂಳಿ ಮಾರ್ಗವಾಗಿ ವಿಜಯಪುರದ ಸಿದ್ಧೇಶ್ವರ ದೇವಸ್ಥಾನ ತಲುಪುತ್ತೇವೆ. ಅಲ್ಲಿ ಯತ್ನಾಳರ ಬಿಜೆಪಿ ಸೇರ್ಪಡೆ, ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧೆ ಸಂಬಂಧ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಮೂಲಕ ರಾಜ್ಯ ಘಟಕದ ಅಧ್ಯಕ್ಷ ಮತ್ತು ರಾಷ್ಟ್ರಾಧ್ಯಕ್ಷರಿಗೆ ಮನವಿ ಸಲ್ಲಿಸಲಾಗುತ್ತದೆ. ಪಾದಯಾತ್ರೆಯಲ್ಲಿ 80 ರಿಂದ 100 ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಇಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲೇಬೇಕಾಗಿದೆ. ಇದಕ್ಕಾಗಿ ಯತ್ನಾಳ ಅವರೇ ಸೂಕ್ತ ಅಭ್ಯರ್ಥಿ ಆಗಿದ್ದಾರೆ. ನಾವು ಯತ್ನಾಳರ ಅಭಿಮಾನಿಗಳು. ಆದರೆ ಯಾರ ಹಿಂಬಾಲಕರೂ ಅಲ್ಲ. ಮುದ್ದೇಬಿಹಾಳ ಮತಕ್ಷೇತ್ರದ ಗೆಲುವಿನ ಹಿಂಬಾಲಕರೆನ್ನಿಸಿಕೊಳ್ಳುವ ಉದ್ದೇಶದಿಂದ ಗೆಲ್ಲುವ ವ್ಯಕ್ತಿ ಇಲ್ಲಿ ಸ್ಪರ್ಧಿಸಬೇಕು ಎನ್ನುವ ಅಪೇಕ್ಷೆ ನಮ್ಮೆಲ್ಲರದ್ದಾಗಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ರಾಘವೇಂದ್ರ ಪತ್ತಾರ, ಕೇಶವ ಪತ್ತಾರ, ಮಹಾಂತೇಶ ಹಡಪದ, ದೀಪಕ ರಾಯಚೂರ, ಶಿವಪ್ರಸಾದ ಬಳ್ಳೊಳ್ಳಿ, ವಿಠ್ಠಲ ಪತ್ತಾರ, ಹೊನ್ನೇಶ ಕೋಲಕಾರ, ಈರಣ್ಣ ಕೋಲಕಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.