ADVERTISEMENT

ರಾಜಕೀಯ ಮೇಲಾದರೆ ಸರ್ವನಾಶ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 6:50 IST
Last Updated 13 ಫೆಬ್ರುವರಿ 2011, 6:50 IST

ವಿಜಾಪುರ: ‘ಜನಶಕ್ತಿ ಹಾಗೂ ಸಂತ ಶಕ್ತಿಗಳನ್ನು ರಾಜಕೀಯ ಶಕ್ತಿ ಮೀರಿ ನಿಂತರೆ ದೇಶದ ಸರ್ವನಾಶ ಖಚಿತ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಸಹ ಪ್ರಾಂತ ಪ್ರಚಾರಕ ಶಂಕರಾನಂದ ಎಚ್ಚರಿಸಿದರು.

ಶ್ರೀ ಹನುಮಾನ್ ಶಕ್ತಿ ಜಾಗರಣ ಸಮಿತಿಯಿಂದ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದರು. ಆಕ್ರಮಣಗಳ ಹೊಡೆತಕ್ಕೆ ಸಿಲುಕಿ ಹಲವು ದೇಶಗಳ ಸಂಸ್ಕೃತಿ ನಾಶ ಆದವು. ಆದರೆ, ಭಾರತ ಆಕ್ರಮಣಕ್ಕೆ ಒಳಗಾದರೂ ಸಂಸ್ಕೃತಿಯ ನಾಶ ಸಾಧ್ಯವಾಗಲಿಲ್ಲ. ಅದಕ್ಕೆ ಇಲ್ಲಿಯ ಜನಶಕ್ತಿ ಹಾಗೂ ಸಂತ ಶಕ್ತಿಯೇ ಕಾರಣ ಎಂದರು.

ಜನಶಕ್ತಿ, ಸಂತಶಕ್ತಿ, ರಾಜಕೀಯ ಶಕ್ತಿ ಪೂರಕವಾಗಿರಬೇಕು. ಜನ ಶಕ್ತಿ ಮತ್ತು ಸಂತ ಶಕ್ತಿಯ ಎದುರು ರಾಜಕೀಯ ಶಕ್ತಿ ಯಾವಾಗಲೂ ಮಂಡಿಯೂರಿರಲೇಬೇಕು ಎಂದರು.
ಹಿಂದೂ ಪದವನ್ನು ಭಯೋತ್ಪಾದನೆಯೊಂದಿಗೆ ಜೋಡಿಸುವ ಮೂಲಕ ಕೇಂದ್ರ ಸರ್ಕಾರ ತನ್ನ ಆತ್ಮಹತ್ಯೆಯನ್ನು ತಾನೇ ಮಾಡಿಕೊಳ್ಳುತ್ತಿದೆ. ಹಿಂದೂ ಧರ್ಮದ ಸಾಧು-ಸಂತರ ವ್ಯಕ್ತಿತ್ವಕ್ಕೆ ಮಸಿಬಳಿಯುವ ಷಢ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ವಿರುದ್ಧ ನಾವೆಲ್ಲ ಸಿಡಿದೇಳಬೇಕಾಗಿದೆ ಎಂದು ಹೇಳಿದರು.

‘ಅದ್ಭುತ ಸಂಘಟನಾ ಶಕ್ತಿ ಹೊಂದಿರುವ ಆರ್.ಎಸ್.ಎಸ್. ಹೆಸರನ್ನು ಕೆಡಿಸಿದರೆ ದೇಶದಲ್ಲಿರುವ ಇತರ ಎಲ್ಲ ಹಿಂದೂ ಸಂಘಟನೆಗಳು ಸರ್ವನಾಶವಾಗುತ್ತವೆ ಎಂಬ ದುರುದ್ದೇಶದಿಂದ ಆರ್.ಎಸ್.ಎಸ್.ನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಸಂಘಟನೆಯ ಅನೇಕ ಪ್ರಮುಖರನ್ನು ಬಂಧಿಸಿ, ಸುಳ್ಳು ತಪ್ಪೊಪ್ಪಿಗೆ ಹೇಳಿಕೆಗಳನ್ನು ಸೃಷ್ಟಿಸಲಾಗುತ್ತಿದೆ’ ಎಂದು ದೂರಿದರು.

ಸ್ಥಳೀಯ ಜ್ಞಾನಯೋಗಾಶ್ರಮದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ವನಶ್ರೀ ಸಂಸ್ಥಾನಮಠದ ಶ್ರೀಜಯದೇವ ಜಗದ್ಗುರು, ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಶಿವಬಸವ ಯೋಗಾಶ್ರಮದ ಶ್ರೀ ಶಂಭುಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಆರ್.ಎಸ್.ಎಸ್. ಮುಖಂಡ ಸಿದ್ರಾಮಪ್ಪ ಉಪ್ಪಿನ ವೇದಿಕೆಯಲ್ಲಿದ್ದರು.

ಇದಕ್ಕೂ ಮೊದಲು ನಗರದಲ್ಲಿ ಆರ್.ಎಸ್.ಎಸ್. ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇಲ್ಲಿಯ ಮಠಪತಿಗಲ್ಲಿಯಿಂದ ಆರಂಭವಾದ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ಧೇಶ್ವರ ಕಲಾ ಭವನದಲ್ಲಿ ಕೊನೆಗೊಂಡಿತು. ಪಥಸಂಚಲನ ಮಾರ್ಗವನ್ನು ವಿಶಿಷ್ಟವಾಗಿ ಅಲಂಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.