ADVERTISEMENT

`ರೈತರಿಗೆ ಪಿಂಚಣಿ, ಮಹಿಳಾ ಬ್ಯಾಂಕ್'

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:57 IST
Last Updated 9 ಏಪ್ರಿಲ್ 2013, 6:57 IST

ವಿಜಾಪುರ: `ರೈತರಿಗೆ ಮಾಸಿಕ ಪಿಂಚಣಿ, ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪನೆ. ಮಧ್ಯಮ ವರ್ಗದವರಿಗೂ ಭಾಗ್ಯಲಕ್ಷ್ಮಿ ಯೋಜನೆ ವಿಸ್ತರಣೆ, ಉನ್ನತ ಶಿಕ್ಷಣದ ವೆಚ್ಚವನ್ನು ಸರ್ಕಾರದಿಂದಲೇ ಭರಿಸುವುದು. ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಜಾರಿ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ದೇವರ ಹಿಪ್ಪರಗಿ, ಇಂಡಿ, ಕೊಲ್ಹಾರಗಳಲ್ಲಿ ಸೋಮವಾರ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ  ಈ ಮಾಹಿತಿ ನೀಡಿದರು.

`ಮಧ್ಯಮ ವರ್ಗದವರನ್ನು ಎಲ್ಲ ಸರ್ಕಾರಗಳು ನಿರ್ಲಕ್ಷಿಸಿವೆ ಎಂಬ ಆರೋಪ ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಭಾಗ್ಯಲಕ್ಷ್ಮಿ ಯೋಜನೆಗೆ ಇರುವ ಆದಾಯದ ಮಿತಿಯನ್ನು ತೆಗೆದುಹಾಕಿ ಎಲ್ಲರಿಗೂ ಅದನ್ನು ವಿಸ್ತರಿಸಲಾಗುವುದು' ಎಂದರು.

`ಮಹಿಳೆಯರ ಸಬಲೀಕರಣಕ್ಕೆ ಸಹಕಾರ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪಿಸಿ, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಾಖೆ ತೆರೆಯಲಾಗುವುದು. ಅದಕ್ಕೆ ರೂ. 2000 ಕೋಟಿ ಮೂಲ ಧನ ನೀಡಲಾಗುವುದು. ಹೈನುಗಾರಿಕೆ, ಗುಡಿ ಕೈಗಾರಿಕೆಗೆ ಒತ್ತು ನೀಡಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವು ಒದಗಿಸಲಾಗುವುದು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂ. 2000 ಕೋಟಿ ಮೀಸಲಿಡಲಾಗುವುದು. ಬಡ ಮಕ್ಕಳ ಉನ್ನತ ವ್ಯಾಸಂಗದ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು' ಎಂದು ಹೇಳಿದರು.

`ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸಲಾಗುವುದು ಹಾಗೂ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು. ಎಲ್ಲ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿ ಪಡಿಸಲಾಗುವುದು. ನಾನು ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ರೂ. 2 ಲಕ್ಷ ಕೋಟಿ ಬಜೆಟ್ ಮಂಡಿಸುತ್ತೇನೆ' ಎಂದರು.

`ಒಂದು ಲಕ್ಷ ಕೋಟಿ ಸಾಲ ತಂದಾದರೂ ಸರಿ. ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ರೈತರಿಗೆ ಪಿಂಚಣಿ ಹಾಗೂ ಬಡಮಕ್ಕಳ ಉನ್ನತ ಶಿಕ್ಷಣ ವೆಚ್ಚ ಭರಿಸುವ ಯೋಜನೆ ಜಾರಿಗೊಳಿಸುತ್ತೇನೆ' ಎಂದು ಹೇಳಿದರು.

`224 ಸ್ಥಾನಗಳ ಪೈಕಿ 200 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ನಮ್ಮದು ಹೊಸ ಪಕ್ಷ, ಹೊಸ ಮುಖಗಳಿಗೆ ಅವಕಾಶ ನೀಡುತ್ತಿದ್ದೇವೆ. 144 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಇದೇ 10ರಂದು ಉಳಿದ ಅಭ್ಯರ್ಥಿಗಳ ಪಟ್ಟಿ ಹಾಗೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು' ಎಂದರು.

`ಯಡಿಯೂರಪ್ಪ ಇಲ್ಲದಿದ್ದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ವಿಳಾಸವೂ ಇರುತ್ತಿರಲಿಲ್ಲ. ನಾನಿಲ್ಲದ ಬಿಜೆಪಿಯಿಂದ ಅವರು ಗೆದ್ದು ತೋರಿಸಲಿ' ಎಂದು ತಮ್ಮ ಪುತ್ರನ ರಾಜೀನಾವೆು ಕುರಿತು ಜೋಶಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಗೋಹತ್ಯೆ ನಿಷೇಧ ವಿಷಯ ಈಗ ಅಪ್ರಸ್ತುತ ಎಂದಷ್ಟೇ ಹೇಳಿದರು.

ಸಮಗ್ರ ನೀರಾವರಿ: `ದೇವರ ಹಿಪ್ಪರಗಿ ಕ್ಷೇತ್ರದ ಸ್ಥಿತಿ ಕಂಡು ನನಗೆ ಕಣ್ಣೀರು ಬರುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಪಕ್ಷಗಳ ಶಾಸಕರಿಗೂ ಅನುದಾನ ನೀಡಿದರೂ, ಈ ಕ್ಷೇತ್ರ ಇಷ್ಟೊಂದು ಹಿಂದುಳಿದಿದ್ದೇಕೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲಿಸಿದರೆ ಈ ಕ್ಷೇತ್ರವನ್ನು ಸಮಗ್ರ ನೀರಾವರಿ ಗೊಳಪಡಿಸಲಾಗುವುದು. ಆ  ಕುರಿತು ರಕ್ತದಲ್ಲಿ ಬರೆದು ಕೊಡುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.

ರಾಜೀನಾಮೆ ಕೊಡ್ತೀವಿ: `ನಾಗಠಾಣ ಮತ್ತು ದೇವರ ಹಿಪ್ಪರಗಿ ಕ್ಷೇತ್ರಗಳ ಜಮೀನಿಗೆ ನೀರು ಹರಿಸುವ ಚಿಮ್ಮಲಗಿ ಯೋಜನೆಗೆ ಚಾಲನೆ ನೀಡಿದ್ದು ಯಡಿಯೂರಪ್ಪ. ಈ ಕ್ಷೇತ್ರಗಳಲ್ಲಿ ನಮ್ಮನ್ನು ಆಯ್ಕೆ ಮಾಡಿದರೆ ಮೂರು ವರ್ಷಗಳಲ್ಲಿ ನಿಮ್ಮ ಜಮೀನುಗಳಿಗೆ ನೀರು ಹರಿಸುತ್ತೇವೆ. ಇಲ್ಲದಿದ್ದರೆ ರಾಜೀನಾಮೆ ನೀಡುತ್ತೇವೆ' ಎಂದು ನಾಗಠಾಣದ ಬಿಜೆಪಿ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
`ಸಚಿವ ನಿರಾಣಿ ಮೋಸ ಮಾಡಿದರು. ದೇವರ ಹಿಪ್ಪರಗಿ ಶಾಸಕರು ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಕರಗೌಡ ಪಾಟೀಲ ದೂರಿದರು.

ಪಕ್ಷದ ನಾಗಠಾಣ ಕ್ಷೇತ್ರದ ಅಭ್ಯರ್ಥಿ ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ), `ನಾನು ಭರವಸೆ ನೀಡುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇನೆ. ಅಪಪ್ರಚಾರಕ್ಕೆ ಕಿವಿಗೊಡದೆ ಬೆಂಬಲಿಸಿ' ಎಂದು ಕೋರಿದರು.

ಪಕ್ಷದ ಮುಖಂಡರಾದ ಮಂಗಳಾದೇವಿ ಬಿರಾದಾರ, ಹುಚ್ಚೇಶ ಕುಂಬಾರ, ಮಾಜಿ ಶಾಸಕ ಕುಮಾರಗೌಡ, ವಿಶ್ವನಾಥ ಭಾವಿ, ಬಿ.ಎಚ್. ಮಹಾಬರಿ, ಮಲ್ಲಾರಿ, ಸಿದ್ದಿಕಿ, ಶಬ್ಬೀರ ಜಹಗೀರದಾರ, ವಿದ್ಯಾರಾಣಿ ತುಂಗಳ, ರಮೇಶ ಮ್ಯಾಕೇರಿ ಇತರರು ವೇದಿಕೆಯಲ್ಲಿದ್ದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕಾಶೀನಾಥ ಮಸಬಿನಾಳ ಸ್ವಾಗತಿಸಿದರು.

ಬಿಎಸ್‌ಎಫ್ ಭದ್ರತೆ: ದೇವರ ಹಿಪ್ಪರಗಿಯಲ್ಲಿ ನಡೆದ ಕೆಜೆಪಿ ಪ್ರಚಾರ ಸಭೆಯ ಭದ್ರತೆಗೆ ಗಡಿ ಭದ್ರತಾ ಪಡೆಯ ಯೋಧರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.