ADVERTISEMENT

ವರ್ಗ 2ಎಗೆ ಆದಿಬಣಜಿಗ: ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 6:25 IST
Last Updated 15 ಸೆಪ್ಟೆಂಬರ್ 2011, 6:25 IST

ವಿಜಾಪುರ: ವೀರಶೈವ ಆದಿಬಣಜಿಗರ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶಂಕರಗೌಡ ಸರ್ಕಾರವನ್ನು ಒತ್ತಾಯಿಸಿದರು.ನಗರದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ವೀರಶೈವ ಆದಿ ಬಣಜಿಗರ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹೋರಾಟಗಾರ ಪಂಚಪ್ಪ ಕಲಬುರ್ಗಿ ಮಾತನಾಡಿ, ಸಮಾಜವು ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದಿದೆ. ಸಮಾಜದ ಎಲ್ಲ ಬಾಂಧವರು ಸಂಘಟಿತರಾಗಿ ಹೋರಾಡಬೇಕಿದೆ ಎಂದರು.

ಶ್ರೀಪತಿಗೌಡ ಬಿರಾದಾರ, ಸಾಹಿತಿ ಮಲ್ಲಿಕಾರ್ಜುನ ಜೇವರಗಿ, ಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಬಾಣದವರ, ಸದಾಶಿವ ಕಾರಡಗಿ, ಹೈಬತ್ತಿ ಸಮಾಜದ ಸಂಘಟನೆಗೆ ಒತ್ತು ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಪಾಟೀಲ, ರಾಜ್ಯದಲ್ಲಿ ಆದಿ ಬಣಜಿಗ ಸಮಾಜದವರು ಬಹುಸಂಖ್ಯೆಯಲ್ಲಿ ಇದ್ದಾರೆ. ಸರ್ಕಾರದಿಂದ ಈ ವರೆಗೂ ಯಾವುದೇ ಸೌಲಭ್ಯ ಪಡೆದಿಲ್ಲ. ಈ ಸಮಾಜದ ಬಗ್ಗೆ ಸರ್ಕಾರ ಗಮನ ಹರಿಸದಿದ್ದರೆ ಗಂಭೀರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್.ಪಿ. ಬಿರಾದಾರ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಎಂ.ಬಿ. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಪರಗೊಂಡೆ ವಂದಿಸಿದರು.

ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ
ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ವಿಶಿಷ್ಟ ಆಧಾರ್ ಗುರುತಿನ ಚೀಟಿ ಮಾಹಿತಿ ಸಂಗ್ರಹಿಸುವ ಕೇಂದ್ರವನ್ನು ಪ್ರಾರಂಭಿಸಲಾಗಿದೆ.ವಿಜಾಪುರ ವಿಭಾಗದ ಅಂಚೆ ಅಧೀಕ್ಷಕ ಡಿ.ಬಿ. ಕುಲಕರ್ಣಿ ತಮ್ಮ ಮಾಹಿತಿ ನೀಡುವ ಮೂಲಕ ಕೇಂದ್ರಕ್ಕೆ ಚಾಲನೆ ನೀಡಿದರು.

ಇದೇ ರೀತಿ ಆಧಾರ್ ಕೇಂದ್ರಗಳನ್ನು ಮುದ್ದೇಬಿಹಾಳ, ಸಿಂದಗಿ, ತಾಳಿಕೋಟೆ, ಚಡಚಣ, ಇಂಡಿ, ಬಸವನ ಬಾಗೇವಾಡಿ ಅಂಚೆ ಕಚೇರಿಗಳಲ್ಲಿಯೂ ಸಹ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಕುಲಕರ್ಣಿ ಹೇಳಿದರು.

ಎಲ್ಲ ನಾಗರಿಕರಿಗೂ ಸರ್ಕಾರದ ಸೌಲಭ್ಯಗಳು ಸುಗಮವಾಗಿ ತಲುಪಲು ಮತ್ತು ಗುರುತಿನ ಪತ್ರಗಳಲ್ಲಿ ಏಕತಾನತೆ ತರಲು ಪ್ರಾರಂಭಿಸಿರುವ ಈ ವಿಶಿಷ್ಠ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.

ಜಿ.ಕೆ. ಶಿಳ್ಳೀನ, ಪತ್ತಾರ, ಎಸ್.ಡಿ. ಹಿಳ್ಳಿ, ಎಸ್.ಬಿ. ಪಾಟೀಲ, ಪಿ.ಎಸ್. ಹೆಡಿಜೋಳ, ಎಸ್.ಟಿ. ಬಗಲಿ, ಪಿ.ಜಿ. ರೊಟ್ಟಿ, ಎಚ್.ಕೆ. ಜೋಶಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.