ADVERTISEMENT

ವಿಜಾಪುರ ವಿದ್ಯುತ್ ನೆರೆ ಜಿಲ್ಲೆಗಳ ಪಾಲು!

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:35 IST
Last Updated 2 ಅಕ್ಟೋಬರ್ 2012, 4:35 IST

ವಿಜಾಪುರ: ಬರದಿಂದ ಬೆಂಡಾಗಿರುವ ಜಿಲ್ಲೆಯ ಜನತೆ ಹಾಗೂ ರೈತರನ್ನು ವಿದ್ಯುತ್ ಸಮಸ್ಯೆ ಮತ್ತಷ್ಟು ಸಂಕಷ್ಟ ಕ್ಕೀಡು ಮಾಡುತ್ತಿದೆ. ಕುಡಿಯುವ ನೀರು, ರೈತರ ಪಂಪ್‌ಸೆಟ್-ಏತ ನೀರಾವರಿ ಯೋಜನೆಗಳಿಗೂ ಇದರ `ಬಿಸಿ~ ತಟ್ಟಿದೆ.

ಜಿಲ್ಲೆಯಲ್ಲಿ ವಿಜಾಪುರ ನಗರ, ಬಸವನ ಬಾಗೇವಾಡಿ ಹಾಗೂ ಇಂಡಿ ಹೀಗೆ 220 ಕೆ.ವಿ. ಸಾಮರ್ಥ್ಯದ ಮೂರು ವಿದ್ಯುತ್ ವಿತರಣಾ ಕೇಂದ್ರಗಳಿವೆ. ಬಸವನ ಬಾಗೇವಾಡಿ ಕೇಂದ್ರಕ್ಕೆ ನಿತ್ಯ ಹಗಲು ಹೊತ್ತಿನಲ್ಲಿ 90 ಮೆಗಾ ವಾಟ್, ಸಂಜೆ 130ರಿಂದ 140 ಮೆಗಾ ವಾಟ್. ವಿಜಾಪುರ ನಗರಕ್ಕೆ ನಿತ್ಯ ಹಗಲು ಹೊತ್ತಿನಲ್ಲಿ 60 ಮೆಗಾ ವಾಟ್, ಸಂಜೆ 70ರಿಂದ 80 ಮೆಗಾ ವಾಟ್ ಹಾಗೂ ಇಂಡಿ ವಿತರಣಾ ಕೇಂದ್ರಕ್ಕೆ ನಿತ್ಯ 65 ಮೆಗಾ ವಾಟ್‌ನಷ್ಟು ವಿದ್ಯುತ್‌ನ ಅವಶ್ಯಕತೆ ಇದೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.

ಬೇಡಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಾಸವೇ ವಿದ್ಯುತ್ ಸಮಸ್ಯೆಗೆ ಕಾರಣ ಎಂದು ಅವರು ಸಬೂಬು ನೀಡುತ್ತಾರೆ.

ವಿದ್ಯುತ್ ಸಮಸ್ಯೆಯಿಂದಾಗಿ ವಿಜಾಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ-ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ವಿದ್ಯುತ್ ಇರುತ್ತಿರಲಿಲ್ಲ. ಈಗ ವಿದ್ಯುತ್ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಗಿರಣಿಯಲ್ಲಿ ಹಿಟ್ಟು ಬೀಸುವುದಕ್ಕೂ ಕುತ್ತು ಬಂದಿದೆ ಎಂದು ಜನ ದೂರುತ್ತಿದ್ದಾರೆ.

`ಜಿಲ್ಲೆಯ ಬಹುತೇಕ ರೈತರು ಪಂಪ್‌ಸೆಟ್ ಅವಲಂಬಿಸಿದ್ದು, ವಿದ್ಯುತ್ ಇಲ್ಲದ ಕಾರಣ ಬೆಳೆಗಳಿಗೆ ನೀರು ಪೂರೈಸಲು ಆಗುತ್ತಿಲ್ಲ. ಹೀಗಾಗಿ ಬೆಳೆ ಒಣಗುತ್ತಿದೆ. ಬರದಿಂದ ಸಂಪೂರ್ಣ ಬೆಳೆ ನಾಶ ವಾಗಿದ್ದು, ಅಳಿದುಳಿದ ನೀರಾವರಿ ಪ್ರದೇಶದ ಬೆಳೆಯನ್ನೂ ಈಗ ವಿದ್ಯುತ್ ಆಹುತಿ ಪಡೆಯುತ್ತಿದೆ~ ಎಂದು ರೈತಾಪಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಪ್ರತಿಭಟನೆ, ಹೆಸ್ಕಾಂ ಕಚೇರಿಗಳಿಗೆ ಮುತ್ತಿಗೆಗಳು ಸಾಮಾನ್ಯ ಎಂಬಂತಾಗಿದೆ.

`ವಿದ್ಯುತ್ ಸಮಸ್ಯೆ ಮಿತಿಮೀರಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಗೂ ವಿದ್ಯುತ್ ಸಮಸ್ಯೆಯ ಬಿಸಿ ತಟ್ಟಿದೆ. ನಮ್ಮ ಜಿಲ್ಲೆಗೆ ಅಗತ್ಯವಿರುವ ವಿದ್ಯುತ್‌ನ್ನು ಪೂರೈಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು~ ಎಂಬುದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಆಗ್ರಹ.

`ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಹೋಲಿಸಿದರೆ ವಿದ್ಯುತ್ ಪೂರೈಕೆಯಲ್ಲಿ ವಿಜಾಪುರ ಜಿಲ್ಲೆಗೆ ತಾರತಮ್ಯ ಮಾಡಲಾಗುತ್ತಿದೆ. ಒಂದೆಡೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳುತ್ತಿರುವ ಸರ್ಕಾರ ಇನ್ನೊಂದೆಡೆ ಸಮರ್ಪಕ ವಿದ್ಯುತ್ ಪೂರೈಸದೇ ರೈತರನ್ನು ಕೊಲ್ಲುತ್ತಿದೆ~ ಎಂದು ಆಡಳಿತಾರೂಢ ಬಿಜೆಪಿ ಪಕ್ಷದ ಇಂಡಿ ಕ್ಷೇತ್ರದ ಶಾಸಕ ಡಾ.ಸಾರ್ವಭೌಮ ಬಗಲಿ ಬಹಿರಂಗವಾಗಿಯೇ ತಮ್ಮ ಸರ್ಕಾರದ ವಿರುದ್ಧ ಗುಡುಗಿದ್ದರು.

`ವಿದ್ಯುತ್ ಸಮಸ್ಯೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಇಂಡಿಯ 220 ಕೆ.ವಿ. ವಿತರಣಾ ಕೇಂದ್ರಕ್ಕೆ ನಿತ್ಯ 65 ಮೆಗಾ ವಾಟ್ ವಿದ್ಯುತ್‌ನ ಅವಶ್ಯಕತೆ ಇದೆ. ಕೇವಲ 30 ಮೆಗಾ ವಾಟ್ ವಿದ್ಯುತ್ ಪೂರೈಸ ಲಾಗುತ್ತಿತ್ತು.
 
ನಾನು ಬಹಿರಂಗವಾಗಿ ಹೇಳಿಕೆ ನೀಡಿದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. 32ರಿಂದ 50 ಮೆಗಾವಾಟ್ ವಿದ್ಯುತ್ ಕೊಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ ನಮ್ಮ ರೈತರು ಸಂತೃಪ್ತ ರಾಗಿಲ್ಲ. ಇಂಡಿಯಲ್ಲಿ ಇದೇ 2ರಂದು ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿ ದ್ದಾರೆ. ನಾನೂ ಅದರಲ್ಲಿ ಪಾಲ್ಗೊಂಡು ರೈತರಿಗೆ ಸಮಸ್ಯೆಯ ಮನವರಿಕೆ ಮಾಡಿ ಕೊಡುತ್ತೇನೆ~ ಎನ್ನುತ್ತಾರೆ ಶಾಸಕ ಡಾ.ಸಾರ್ವಭೌಮ ಬಗಲಿ.

`ಆಲಮಟ್ಟಿ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಪ್ರತಿ ಗಂಟೆಗೆ 6393 ಕೆ.ವಿ.ಯಷ್ಟು ವಿದ್ಯುತ್‌ನ್ನು ನಿತ್ಯ 18 ಗಂಟೆಗಳ ಕಾಲ ನಿರಂತರವಾಗಿ ಪೂರೈಸುವ ಒಪ್ಪಂದವಿದೆ. ಆದರೆ, ಈ ಏತ ನೀರಾವರಿ ಯೋಜನೆಗಳಿಗೂ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೀಗಾಗಿ ಕಾಲುವೆಯ ಕೊನೆ ಹಂತದ ವರೆಗೂ ನೀರು ತಲುಪುತ್ತಿಲ್ಲ~ ಎಂಬ ಅಸಮಾಧಾನ ಕೃಷ್ಣಾ ಕಣಿವೆ ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವ ರಾಜ ಕುಂಬಾರ ಅವರದ್ದು.

`25 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆ ಒಣಗುತ್ತಿದೆ.  ಕಾರ್ಖಾನೆಗಳಿಗೆ ಒಂದೆರಡು ಗಂಟೆ ಕಡಿವೆು ವಿದ್ಯುತ್ ಪೂರೈಸಿ ಆ ವಿದ್ಯುತ್‌ನ್ನು ರೈತರಿಗೆ ನೀಡಿದರೆ ಆಹಾರ  ಉತ್ಪಾದನೆ ಆಗಬಹುದು~ ಎನ್ನುತ್ತಾರೆ ಕುಂಬಾರ.

`ವಿದ್ಯುತ್ ತೊಂದರೆ ಕುರಿತು ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ವ್ಯವ ಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿ ಸಿದ್ದು, ಹೆಚ್ಚುವರಿ ವಿದ್ಯುತ್ ನೀಡಬೇಕು ಎಂದು ಕೋರಿದ್ದೇನೆ. ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಕಪಿಲ್‌ಮೋಹನ ಅವರೂ ಸಹ ಜಿಲ್ಲೆಯ ವಿದ್ಯುತ್ ಸಮಸ್ಯೆಯನ್ನು ಇಂಧನ ಸಚಿವರ ಗಮನಕ್ಕೆ ತಂದಿದ್ದಾರೆ. ಪರಿಸ್ಥಿತಿ ಈಗ ಸುಧಾರಿಸುತ್ತಿದೆ~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಪ್ರತಿಕ್ರಿಯಿಸಿದರು.

`ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಬೇರೆಡೆಯಿಂದ ವಿದ್ಯುತ್ ಖರೀದಿಸುವ ಪ್ರಯತ್ನ ರಾಜ್ಯ ಸರ್ಕಾರ ನಡೆಸಿದ್ದು, ಹೆಚ್ಚುವರಿ ವಿದ್ಯುತ್ ಲಭ್ಯವಾದರೆ ಜಿಲ್ಲೆಯ  ಸಮಸ್ಯೆಗೆ ಪರಿಹಾರ ದೊರೆಯಲಿದೆ~ ಎಂದೂ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಆದರೆ, ಹೆಸ್ಕಾಂ ಅಧಿಕಾರಿಗಳ ವಾದವೇ ಬೇರೆ. `ವಿಜಾಪುರ ನಗರದಲ್ಲಿ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಗಂಟೆ ಮಾತ್ರ ವಿದ್ಯುತ್ ಕಡಿತ ಮಾಡ ಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹಗಲು 2 ಗಂಟೆ, ಸಂಜೆ 3-4 ಗಂಟೆ ಹಾಗೂ ಮಧ್ಯರಾತ್ರಿ 2 ಗಂಟೆ ಹೀಗೆ ನಿತ್ಯ ಕನಿಷ್ಠ 8 ಗಂಟೆ ಮೂರು ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಈಗ ಮಳೆಯಾಗಿರುವುದರಿಂದ ವಿದ್ಯುತ್ ಸಮಸ್ಯೆ ಅಷ್ಟಾಗಿ ಇಲ್ಲ~ ಎನ್ನುತ್ತಾರೆ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಅವರು. ಅಳಿದುಳಿದ ಬೆಳೆಯೂ ಹಾನಿ, ಕುಡಿಯುವ ನೀರು; ನೀರಾವರಿಗೂ ತತ್ವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.