ADVERTISEMENT

ವಿದೇಶಿ ವಿದ್ಯಾರ್ಥಿಗಳೊಂದಿಗೆ ಪ್ರಾಜೆಕ್ಟ್ ಕಾರ್ಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:23 IST
Last Updated 7 ಡಿಸೆಂಬರ್ 2012, 6:23 IST

ವಿಜಾಪುರ: ಅಮೆರಿಕೆಯ ಗೆಸ್ಟ್‌ವುಸ್ ಕಾಲೇಜು, ಕೊನಕೊರ‌್ಡಿಯಾ ಸ್ಕೂಲ್ ಆಫ್ ಬಿಜಿನೆಸ್ ಹಾಗೂ ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳಲು ಚರ್ಚೆ ನಡೆಯಿತು.

ವಿಜಾಪುರ ಮಹಿಳಾ ವಿವಿಗೆ ಭೇಟಿ ನೀಡಿದ್ದ ಅಮೆರಿಕೆಯ ನಿಯೋಗದ ನೇತೃತ್ವ ವಹಿಸಿದ್ದ ಡಾ.ಮಾರ್ಕ್ ಜೆ.  ಬ್ರೌನ್, `ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರ ಸಹಯೋಗದಲ್ಲಿ ಅಮೆರಿಕೆಯ ವಿದ್ಯಾರ್ಥಿನಿಯರು 2013ರ ಅಕ್ಟೋಬರ್‌ನಿಂದ ಮಹಿಳಾ ಉದ್ಯಮಶೀಲತೆ ಕುರಿತು ತಿಂಗಳ ಪ್ರಾಜೆಕ್ಟ್ ಕಾರ್ಯ ಕೈಗೊಳ್ಳಲು ಮುಂದಾಗಿದ್ದಾರೆ' ಎಂದರು.

ಮಹಿಳಾ ಉದ್ಯಮಶೀಲತೆಯಲ್ಲಿನ ಹಣಕಾಸು ನಿರ್ವಹಣೆ , ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಮೆರಿಕೆ ಹಾಗೂ ಮಹಿಳಾ ವಿವಿ ವಿದ್ಯಾರ್ಥಿನಿಯರು ಅಧ್ಯಯನ ಮಾಡುವರು. ಈ ಕಾರ್ಯಕ್ಕಾಗಿ ಅಮೆರಿಕೆಯ ಹಾಗೂ ಮಹಿಳಾ ವಿವಿಯ ತಲಾ ಆರು ಜನ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುವುದು. ಸೃಜನಶೀಲತೆಯನ್ನು ವಿದ್ಯಾರ್ಥಿನಿಯರಲ್ಲಿ ಬೆಳೆಸುವುದು ಅಧ್ಯಯನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಮಹಿಳಾ ವಿವಿ ಕುಲಸಚಿವ ಪ್ರೊ.ಜಿ.ಆರ್. ನಾಯಕ ಮಾತನಾಡಿ, ಅಮೆರಿಕೆಯ ವಿದ್ಯಾರ್ಥಿನಿಯರ ಜೊತೆ ಅಧ್ಯಯನ ಮಾಡುವುದರಿಂದ ಇಲ್ಲಿಯ ವಿದ್ಯಾರ್ಥಿನಿಯರಿಗೆ ಹೊಸ ಅನುಭವ ಪಡೆದುಕೊಳಲು ಸಹಕಾರಿಯಾಗುತ್ತದೆ. ಈ ಕಾರ್ಯಕ್ಕೆ ಮಹಿಳಾ ವಿವಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಕುಲಪತಿಗಳ ಜೊತೆಗೆ ಚರ್ಚಿಸಿ ಶೈಕ್ಷಣಿಕ ತರಬೇತಿಗಾಗಿ ಅಧ್ಯಾಪಕರನ್ನು ಕಳಿಸುವುದು ಹಾಗೂ ಕಾರ್ಯಾಗಾರ, ಉಪನ್ಯಾಸ ಏರ್ಪಡಿಸಲು ಕ್ರಮ ಜರುಗಿಸುವುದಾಗಿ ಹೇಳಿದರು.

ಮಹಿಳಾ ವಿವಿ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಕಾಮಶೆಟ್ಟಿ, ಭಾರತದಲ್ಲಿನ ವಾಣಿಜ್ಯ ನಿರ್ವಹಣೆ ಶಿಕ್ಷಣ ಕುರಿತಂತೆ ಮಾಹಿತಿ ನೀಡಿದರು. ನಂತರ ಜ್ಞಾನವಾಹಿನಿ ಮೀಡಿಯಾ ಸೆಂಟರ್‌ಗೆ ಭೆಟ್ಟಿ ನೀಡಿದ ತಂಡ, ಎಂ.ಬಿ.ಎ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು.

ಡಾ.ಜಾರ್ಜ್ ಕ್ಯಾಟ್, ಗ್ಲೋಬಲ್ ಲರ್ನಿಂಗ್‌ನ ಡಾ.ಪೀರ ಅಂಡ್ರಸನ್, ಮಹಿಳಾ ವಿವಿಯ ಡಾ. ಸಂಜೀವ ಕುಮಾರ. ಡಾ.ಅನಿತಾ ನಾಟೀಕರ, ಡಾ. ಓಂಕಾರ ಕಾಕಡೆ, ಡಾ.ಜೆ.ಎಂ. ಚಂದುನವರ, ವಿಜಾಪುರ ಸಬಲಾ ಸ್ವಯಂ ಸೇವಾ ಸಂಸ್ಥೆ ಸಂಸ್ಥಾಪಕಿ ಯಲ್ಲಮ್ಮ ಯಾಳವಾರ,  ಬೆಂಗಳೂರಿನ ವಿಸ್ತಾರ ಟ್ರಸ್ಟ್‌ನ  ಸಂಪತ್‌ಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.