ಬಸವನಬಾಗೇವಾಡಿ: ತಾಲ್ಲೂಕಿನ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ವಿದ್ಯುತ್ ಅಭಾವದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ವಿದ್ಯುತ್ ಅಭಾವವನ್ನು ಸರಿಪಡಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಶನಿವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವಿದ್ಯುತ್ ಇಲಾಖೆಯ ಶಾಖಾಧಿಕಾರಿಗಳ ಕಚೇರಿಗೆ ತೆರಳಿ ಶಾಖಾಧಿರಿಗಾಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪು ಗಬ್ಬೂರ, ಗ್ರಾಮದಲ್ಲಿ ಅನಿಯಮಿತ ವಿದ್ಯುತ್ ಸರಬರಾಜಿನಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಗಳು ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಯಾಗುತ್ತಿದೆ. ಅಲ್ಲದೇ ಕುಡಿಯುವ ನೀರಿನ ಸರಬರಾಜಿನಲ್ಲಿ ವಿಳಂಬ ಉಂಟಾಗುತ್ತಿದೆ. ಕಾರಣ ಗ್ರಾಮದಲ್ಲಿ ಲೋಡ್ ಶೆಡ್ಡಿಂಗ್ ನಿಲ್ಲಿಸಿ ಹೆಚ್ಚಿನ ಸಮಯ ವಿದ್ಯುತ್ ಸರಬರಾಜು ಮಾಡುವುದರ ಮೂಲಕ ವಿದ್ಯಾರ್ಥಿಗಳ ಮತ್ತು ಕುಡಿಯುವ ನೀರಿನ ತೊಂದರೆ ನಿವಾರಿಸಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಪ್ರತಿಯೊಂದು ವಿಚಾರದಲ್ಲಿಯೂ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಸಮಸ್ಯೆಗೆ ತೊಂದರೆ ಆಗದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಮಂಜು ಮಲಕಣ್ಣವರ, ಸುರೇಶ ರಾಯಗೊಂಡ, ಜಯ ಕರ್ನಾಟಕ ಸಂಘಟನೆಯ ಹೂವಿನ ಹಿಪ್ಪರಗಿ ಗ್ರಾಮ ಘಟಕದ ಅಧ್ಯಕ್ಷ ಶ್ರೀಶೈಲ ತಾಳಿಕೋಟ, ಬಸವರಾಜ ಕಂಚ್ಯಾಣಿ , ಮಂಜುನಾಥ ಗಬ್ಬೂರ, ಹಮಂತ ಹೂಗಾರ, ಸಂಗಮೇಶ ಹುನಗುಂದ, ಪ್ರವಣಿ ಪತಂಗಿ, ಶಾದೀಕ ಮುಲ್ಲಾ, ರಾಜು ಪೂಜಾರಿ, ಶಿವಾನಂದ ಗಿರೀವಾಸ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.