ADVERTISEMENT

ವಿಷಾಹಾರ ಸೇವನೆ: 13 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 9:58 IST
Last Updated 16 ಏಪ್ರಿಲ್ 2013, 9:58 IST

ವಿಜಾಪುರ: ವಿಷಾಹಾರ ಸೇವಿಸಿ ಒಂದೇ ಕುಟುಂಬದ 13 ಜನ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಇಂಡಿ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಸುಖದೇವ ಅಂಬಾಜಿ ಸೋಲಂಕರ ಅವರ   ಮನೆಯ ವರೆಲ್ಲರೂ ಬೆಳಿಗ್ಗೆ ಉಪ್ಪಿಟ್ಟು ಸೇವಿ ಸಿದ್ದರು. ಆ ನಂತರ ಎಲ್ಲರೂ ವಾಂತಿ- ಭೇದಿಯಿಂದ ಬಳಲಾರಂಭಿಸಿದರು.

ಸುಖದೇವ ಅಂಬಾಜಿ ಸೋಲಂಕರ (60), ಆತನ ಪತ್ನಿ ಸುಗಲಾಬಾಯಿ (50), ಪುತ್ರ ಶಿವಾಜಿ (30), ಕಲ್ಪನಾ ದೇವಿ ಶಿವಾಜಿ ಸೋಲಂಕರ, ಭಾಗ್ಯಶ್ರೀ ಶಿವಾಜಿ ಸೋಲಂಕರ, ಕಿರಣ್ ಸೋಲಂಕರ, ಅಂಬಾಜಿ ತಾನಾಜಿ ಸೋಲಂಕರ, ಭುವನೇಶ್ವರಿ ಸೋಲಂಕರ, ಲಕ್ಷ್ಮಿ ಸಿದ್ಧಪ್ಪ ಸೋಲಂಕರ, ಉಡ ಚಣದ ಗ್ರಾಮದ ಮಹಾನಂದಾ ಷಣ್ಮುಖ ಲವಟೆ (40), ವಿನೋದ ಷಣ್ಮುಖ ಲವಟೆ (4),  ಸೋಲಾಪುರ ಜಿಲ್ಲೆ ರತ್ನಾಪುರ ಗ್ರಾಮದ ಭೀಮರಾವ ಮಾರುತಿ ಟೋಮ್ರೆ (65), ಭೀಮಾಬಾಯಿ ಭೀಮರಾವ ಟೋಮ್ರೆ (50) ಅಸ್ವಸ್ಥಗೊಂಡಿದ್ದಾರೆ.

`ಇವರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಒಂಬತ್ತು ಜನ ನಮ್ಮ ಆಸ್ಪತ್ರೆಯಲ್ಲಿದ್ದು, ತೀವ್ರ ಅಸ್ವಸ್ಥಗೊಂಡವರನ್ನು ಬಿಎಲ್‌ಡಿಇ ಆಸ್ಪತ್ರೆಗೆ    ಕಳಿಸಲಾಗಿದೆ' ಎಂದು ಜಿಲ್ಲಾ ಸರ್ಜನ್  ಡಾ.ಆರ್.ಎಂ. ಸಜ್ಜನ ತಿಳಿಸಿದರು.

`ಆರೋಗ್ಯ ಇಲಾಖೆಯವರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರವಷ್ಟೇ ಅವರು ಸೇವಿಸಿದ ಆಹಾರದಲ್ಲಿ ಯಾವ ತೆರನಾದ ವಿಷ ಇತ್ತು ಎಂಬುದು ಗೊತ್ತಾಗಲಿದೆ' ಎಂದರು.

ಘಟನೆಯ ವಿವರ: `ಸುಖದೇವ ಅವರ ಪತ್ನಿ ಸುಗಲಾಬಾಯಿ    ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಭಾನುವಾರ ಬೀಸಿ ಇಟ್ಟಿದ್ದ ಎರಡು ಸೊಲಗಿಯಷ್ಟು ಗೋಧಿ  ರವೆಯನ್ನು ಸೋಮವಾರ ಬೆಳಿಗ್ಗೆ ತಂದಿದ್ದರು. ಅದರಿಂದ ಉಪ್ಪಿಟ್ಟು ತಯಾರಿಸಿದ್ದರು. ಉಪ್ಪಿಟ್ಟು ಸೇವಿಸಿ ಹೊಲಕ್ಕೆ ತೆರಳಿದ ಮಹಾನಂದಾ, ಶಿವಾಜಿ ಹೊಲದಲ್ಲಿ ಅಸ್ವಸ್ಥಗೊಂಡರು.

ತನ್ನ ಮೊಮ್ಮಕಳೊಂದಿಗೆ ಉಪ್ಪಿಟ್ಟು ಸೇವಿಸಿದ ಸುಖದೇವ ಹಾಗೂ ಉಳಿದವರೆಲ್ಲ ಮನೆಯಲ್ಲಿ ಅಸ್ವಸ್ಥಗೊಂಡರು. ಮಾಹಿತಿ ತಿಳಿದು ಅವರನ್ನೆಲ್ಲ ವಿಜಾಪುರ ಆಸ್ಪತ್ರೆಗೆ ಕರೆತರಲಾಯಿತು' ಎಂದ ಹನುಮಂತ ಸೋಲಂಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.