ADVERTISEMENT

ವೃಕ್ಷಮಾತೆಗೆ ಪುಷ್ಪವೃಷ್ಟಿ, ಸನ್ಮಾನ

ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪರಿಸರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 18 ಜೂನ್ 2015, 9:18 IST
Last Updated 18 ಜೂನ್ 2015, 9:18 IST
ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಸಾಲುಮರದ ತಿಮ್ಮಕ್ಕ ಅವರಿಗೆ ಪುಷ್ಪವೃಷ್ಟಿಗೈಯುವ ಮೂಲಕ ಸನ್ಮಾನಿಸಲಾಯಿತು
ವಿಜಯಪುರ ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಸಾಲುಮರದ ತಿಮ್ಮಕ್ಕ ಅವರಿಗೆ ಪುಷ್ಪವೃಷ್ಟಿಗೈಯುವ ಮೂಲಕ ಸನ್ಮಾನಿಸಲಾಯಿತು   

ವಿಜಯಪುರ: ವೃಕ್ಷಮಾತೆ ಎಂದೇ ಹೆಸರಾದ ಸಾಲುಮರದ ತಿಮ್ಮಕ್ಕ ಅವರನ್ನು ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಡೆದ ಪರಿಸರ ಮಹೋತ್ಸವದಲ್ಲಿ ಪುಷ್ಪವೃಷ್ಟಿಗೈಯುವ ಮೂಲಕ ಸನ್ಮಾನಿಸಲಾಯಿತು.

ವೃಕ್ಷಗಳಿಗೆ ಪೂಜೆ ಸಲ್ಲಿಸಿದ ಬಳಿಕ ಶಾಲಾ ಆವರಣದಲ್ಲಿ ಗಿಡ ನೆಟ್ಟು ಅತ್ಯಂತ ಪ್ರೀತಿಯಿಂದ ನೀರುಣಿಸಿದ ಅಜ್ಜಿಯ ಪರಿಸರ ಸಂರಕ್ಷಣೆಯ ಪರಿಯನ್ನು ಕಂಡ ಶಾಲೆಯ ಚಿಣ್ಣರು ಸಂತಸಪಟ್ಟರು. ಪಠ್ಯದಲ್ಲಿರುವ ಜೀವಂತ ದಂತಕತೆಯನ್ನು ನೇರವಾಗಿ ನೋಡಿದ ಸಂಭ್ರಮ ಚಿಣ್ಣರದ್ದು.

ಸಾಲುಮರದ ತಿಮ್ಮಕ್ಕ ಎಲ್ಲರಂತೆ ಸಸಿ ನೆಡುವುದಿಲ್ಲ. ಪೂಜೆ ಸಲ್ಲಿಸಿ ಕರಾರುವಕ್ಕಾದ ವಿಧಾನಗಳೊಂದಿಗೆ ಸಸಿ ನೆಡುತ್ತಾರೆ. ಇದನ್ನು ನೋಡಿದ ಎಲ್ಲರ ಮನದಲ್ಲೂ ಪರಿಸರ ರಕ್ಷಣೆಯ ಕಾಳಜಿ ಜಾಗೃತಗೊಂಡಿತು. 103ರ ಇಳಿ ವಯಸ್ಸಿನಲ್ಲಿಯೂ ಅವರ ವೃಕ್ಷ ಪ್ರೀತಿ ಮಾತ್ರ ಬತ್ತಿಲ್ಲ.

ಪರಿಸರ ರಕ್ಷಣೆಯ ಜೀವಂತ ನಿದರ್ಶ ನವಾಗಿರುವ ಸಾಲು ಮರದ ತಿಮ್ಮಕ್ಕ ಅವರನ್ನು ಕಂಡ ಅನೇಕರು ಭೇಟಿ ಮಾಡಿ, ಕಾಲು ಮುಟ್ಟಿ ನಮಸ್ಕರಿಸಿದರು. ಇನ್ನೂ ಕೆಲವರು ತಮ್ಮ ಮೊಬೈಲ್‌ಗಳಲ್ಲಿ ತಿಮ್ಮಕ್ಕ ಜತೆ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

‘ಪರಿಸರ ನಿತ್ಯವೂ ನಿರೀಕ್ಷಿಸಲಾಗ ದಷ್ಟು ಕಲುಷಿತಗೊಳ್ಳುತ್ತಿದೆ. ಭವಿಷ್ಯ ನೆನೆದರೆ ಮೈ ನಡುಗುತ್ತದೆ. ನಾವೆಲ್ಲ ಎಚ್ಚೆತ್ತುಕೊಂಡು ಪರಿಸರ ರಕ್ಷಣೆಗೆ ಮುಂದಾಗಬೇಕು. ಇಂದಿನ ಮಕ್ಕಳು ಮುಂದಿನ ಪೀಳಿಗೆಗೆ ಕೊಡುವ ಕೊಡುಗೆಯೇ ನವ ಪರಿಸರದ ನಿರ್ಮಾಣವಾಗಬೇಕು.

ಶುದ್ಧ ಪ್ರಕೃತಿಯ ವಾತಾವರಣ ಮೈದಳೆದು ನಿಲ್ಲಬೇಕು. ಇದು ನನ್ನ ಆಶಯ ಮತ್ತು ಪರಿಸರ ಮಾತೆಗೆ ನಾವು ಸಲ್ಲಿಸುವ ಋಣ. ಪರಿಸರ ರಕ್ಷಣೆಗೆ ನಾವು ಆದ್ಯತೆ ನೀಡಬೇಕಿದೆ. ಎಲ್ಲರೂ ಸಸಿಗಳನ್ನು ನೆಡಬೇಕು, ನಂತರ ಸೂಕ್ತ ರೀತಿಯಲ್ಲಿ ಪೋಷಿಸುವುದು ಸಹ ಅಷ್ಟೇ ಮುಖ್ಯ’ ಎಂದು ಸಾಲುಮರದ ತಿಮ್ಮಕ್ಕ ಚಿಣ್ಣರಾದಿಯಾಗಿ ಉಪಸ್ಥಿತರಿದ್ದ ಅಪಾರ ಜನರಿಗೆ ಪರಿಸರದ ಪಾಠ ಬೋಧಿಸಿದರು.

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಪರಿಸರ ರಕ್ಷಣೆ ಕಾರ್ಯದಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇವೆ ಎಂದು ಪ್ರತಿಯೊಬ್ಬರು ಪರಿಸರ ರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಸುರೇಶ ಬಿರಾದಾರ, ಮಧುರಖಂಡಿಯ ಡಾ.ಈಶ್ವರ ಮಂಟೂರ ಮಾತನಾಡಿ ದರು. ಜ್ಞಾನಯೋಗಾಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಬುರಾಣಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ, ತಿಮ್ಮಕ್ಕ ಅವರ ದತ್ತುಪುತ್ರ ಬಿ.ಎನ್‌.ಉಮೇಶ, ಸಂಸ್ಥೆ ಅಧ್ಯಕ್ಷೆ ಪ್ರೊ.ಶೀಲಾ ಬಿರಾದಾರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.