ADVERTISEMENT

ಶಿವಗಿರಿಯಲ್ಲಿ ಶಿವರಾತ್ರಿ ಉತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 7:30 IST
Last Updated 19 ಫೆಬ್ರುವರಿ 2012, 7:30 IST

ವಿಜಾಪುರ: ಇಲ್ಲಿಯ ಶಿವಗಿರಿಯಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಇದೇ 19 ರಿಂದ 21ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟಿ.ಕೆ. ಪಾಟೀಲ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್‌ನ ಎಸ್.ಟಿ. ಪಾಟೀಲ ಹೇಳಿದರು.

19 ರಂದು ಸಂಜೆ 5ಕ್ಕೆ ಹೋಮ ಹವನ, 20 ರಂದು ಬೆಳಿಗ್ಗೆ 5ಕ್ಕೆ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಪ್ರತಿ ಗಂಟೆಗೊಮ್ಮೆ ನಿರಂತರ ಪೂಜೆ ನಡೆಯಲಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 2.30ಕ್ಕೆ ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಶಿವಗಿರಿ ವರೆಗೆ ಪಲ್ಲಕ್ಕಿ, ನಂದಿ ಧ್ವಜಗಳ ಮೆರವಣಿಗೆ ನಡೆಯಲಿದೆ. ಇದರಲ್ಲಿ ಆನೆ, ಒಂಟೆ, ಕುದುರೆ, ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.

ನಂತರ ಸಂಜೆ 7.30ಕ್ಕೆ ಜರುಗುವ ಚಿತ್ತಾಕರ್ಷಕ ಮದ್ದು ಸುಡುವ  ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು. ಜ್ಞಾನಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸುವರು, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಂಸದ ಬಸನಗೌಡ ಪಾಟೀಲ ಯತ್ನಾಳ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.

ಪರಿಸರ ಸಂರಕ್ಷಣೆಗಾಗಿ ಅವಳಿ ಜಿಲ್ಲೆಯಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಯೋಜನೆ ಹೊಂದಲಾಗಿದ್ದು, ಈಗಾಗಲೇ 40 ಸಾವಿರ ಗಿಡಗಳನ್ನು ನೆಡಲಾಗಿದೆ. ಆರ್ಥಿಕ ಸಮಸ್ಯೆಯಿಂದಾಗಿ ಈ ಗಿಡಗಳನ್ನು ನೆಡಲು ಸಾರ್ವಜನಿಕರ ಸಹಕಾರ ಕೋರಲಾಗಿದೆ. ಒಂದು ಗಿಡ ನೆಡಲು 350 ರೂಪಾಯಿ ಖರ್ಚಾಗುತ್ತಿದ್ದು, ಹಣ ನೀಡಿದವರ ಹೆಸರನ್ನು ಆ ಗಿಡಕ್ಕೆ ಇಡಲಾಗುವುದು ಎಂದರು.

ಶಿಕ್ಷಣ ವಂಚಿತ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ನೀಡಲು ತಿಕೋಟಾ ಹತ್ತಿರ 45 ಎಕರೆ ಭೂಮಿ ಖರೀದಿಸಲಾಗಿದೆ. ಏಪ್ರಿಲ್ 24 ರಂದು ಮುಖ್ಯಮಂತ್ರಿಗಳಿಂದ ಈ ಕಟ್ಟಡಕ್ಕೆ ಭೂಮಿ ಪೂಜೆ ನರೆವೇರಿಸಲಾಗುವುದು. ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿ 125 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು.

ಈ ಬಾರಿ ಶಿವರಾತ್ರಿಯಲ್ಲಿ ಶಿವಗಿರಿಯ ದರ್ಶನಕ್ಕೆ ಭಕ್ತರಿಗೆ ಉಚಿತ ಪ್ರವೇಶದ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.ಆರ್.ಟಿ. ಪಾಟೀಲ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ವಧು-ವರ ಸಮ್ಮೇಳನ ಇಂದು

ವಿಜಾಪುರ: ಇಲ್ಲಿಯ ಲಕ್ಷ್ಮಿ ನಾರಾಯಣ ವಧು-ವರರ ಸಂಸ್ಥೆಯಿಂದ ಭಾವಸಾರ ಕ್ಷತ್ರಿಯ, ನಾಮದೇವ ಸಿಂಪಿ ಹಾಗೂ ಇತರೆ ಕ್ಷತ್ರಿಯ ಪಂಗಡಗಳ ವಧು-ವರರ ಸಮ್ಮೇಳನ ಇದೇ 19ರಂದು ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ಸ್ಥಳೀಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಪಾಲ್ಗೊಳ್ಳಬೇಕು ಎಂದು ಸಂಸ್ಥೆಯ ಅಧ್ಯಕ್ಷ ಶ್ರವಣಕುಮಾರ ಮಹಿಂದ್ರಕರ ಮನವಿ ಮಾಡಿದ್ದಾರೆ. ವಧು-ವರರ ಭಾವಚಿತ್ರ ಹಾಗೂ ಸಂಪೂರ್ಣ ಮಾಹಿತಿಯನ್ನೊಳಗೊಂಡ ಒಂದು ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಮಾಹಿತಿಗಾಗಿ ಮೊ.94481 41187 ಸಂಪರ್ಕಿಸುವಂತೆ  ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.