ADVERTISEMENT

ಸಂಗೀತ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ..!

ಪ್ರಕಾಶ ಮಸಬಿನಾಳ
Published 8 ಅಕ್ಟೋಬರ್ 2017, 10:14 IST
Last Updated 8 ಅಕ್ಟೋಬರ್ 2017, 10:14 IST
ರೆಕಾರ್ಡಿಂಗ್‌ನಲ್ಲಿ ತಲ್ಲೀನರಾಗಿರುವ ಶ್ರೀಮಂತ ಅವಟಿ
ರೆಕಾರ್ಡಿಂಗ್‌ನಲ್ಲಿ ತಲ್ಲೀನರಾಗಿರುವ ಶ್ರೀಮಂತ ಅವಟಿ   

ಸಾಧಿಸುವ ಛಲ ಮನದಲ್ಲಿ ಮೂಡಬೇಕು. ಅದಕ್ಕೆ ತಕ್ಕ ಪರಿಶ್ರಮ ವಿನಿಯೋಗಿಸಿದರೆ ಫಲ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಬಸವನಬಾಗೇವಾಡಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ಶ್ರೀಮಂತ ಅವಟಿ ಮಾದರಿ. ಅವಟಿ ಹುಟ್ಟಿನಿಂದ ಅಂಧ. ಕೃಷಿ ಕುಟುಂಬದ ತಂದೆ–ತಾಯಿಗೆ ಇನ್ನಿರಲಾರದ ಚಿಂತಿ. ಹೆತ್ತಕರುಳು ತನ್ನೆಲ್ಲ ಸಮಯವನ್ನು ಮಗನಿಗಾಗಿ ಮೀಸಲಿಟ್ಟಿತು.

ಇದರ ಫಲವಾಗಿ ಹುಬ್ಬಳ್ಳಿ, ಬೆಂಗಳೂರು, ಗದಗದಲ್ಲಿ ಶಿಕ್ಷಣ ಪಡೆದ ಅವಟಿ, ಗದಗಿನ ಪುಟ್ಟರಾಜ ಗವಾಯಿಗಳ ಗರಡಿಯಲ್ಲಿ ಸಂಗೀತದತ್ತ ಒಲವು ಬೆಳೆಸಿಕೊಂಡರು. ಸಂಗೀತ ವಿದ್ವಾನ್‌ ಪದವಿ ಪಡೆದು, ನಾಡಿನ ವಿವಿಧ ಭಾಗ ಸೇರಿದಂತೆ ಹೊರ ರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿ ಅಪಾರ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಇಂಗಳೇಶ್ವರ ರಸ್ತೆಯಲ್ಲಿನ ಇವರ ತೋಟದ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಪುಸ್ತಕ, ಧ್ವನಿಸುರಳಿ ಸಿ.ಡಿ.ಗಳು, ವಿವಿಧ ವಾದ್ಯಗಳು, ಸಂಗೀತ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳನ್ನು ನೋಡಿದರೆ ಸಂಗೀತ ಲೋಕವೇ ಸೃಷ್ಟಿಯಾಗಿದೆ ಎಂದೆನಿಸುತ್ತದೆ.

ADVERTISEMENT

ಉಚಿತ ಶಿಕ್ಷಣ: 2010ರಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ನೇಮಕಗೊಂಡಿರುವ ಅವಟಿ ಶಾಲೆ ಬಿಟ್ಟ ನಂತರ, ರಜಾ ದಿನಗಳಲ್ಲಿ ಸಂಗೀತಾಸಕ್ತರಿಗೆ ಉಚಿತವಾಗಿ ಪಾಠ ಕಲಿಸುತಿದ್ದಾರೆ. ನಿತ್ಯ 50ಕ್ಕೂ ಹೆಚ್ಚು ಶಿಷ್ಯಂದಿರು ಇವರ ಬಳಿ ಕಲಿಕೆಯಲ್ಲಿ ನಿರತರಾಗಿದ್ದಾರೆ. ಸಂಗೀತ ಪರಿಕರಗಳು ಅವಟಿಯವರದ್ದೇ ಎಂಬುದು ಇಲ್ಲಿ ವಿಶೇಷ.

ವಿದೇಶದಲ್ಲಿ ನೆಲೆಸಿರುವ ಕೆಲ ಭಾರತೀಯರಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಿಂದೂಸ್ತಾನಿ, ಶಾಸ್ತ್ರೀಯ, ಸುಗಮ ಸಂಗೀತವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಸುತ್ತಿರುವುದು ಹೆಮ್ಮೆಯ ವಿಷಯ.

ರಾಜ್ಯದ ವಿವಿಧ ಭಾಗ ಸೇರಿದಂತೆ ಹೊರ ರಾಜ್ಯಗಳಲ್ಲಿ ಸಹಸ್ರಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿರುವ ಇವರಿಗೆ ಅಂಧತ್ವ ಎಂದೂ ಅಡ್ಡಿಯಾಗಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನ, ಗಡಿನಾಡು ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ ಸೇರಿದಂತೆ ಮುಂಬಯಿ, ಕೋಲ್ಕತ್ತಾ, ಅಹಮದಾಬಾದ್‌, ಹೈದರಾಬಾದ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

ರೆಕಾರ್ಡಿಂಗ್‌ ರೂಂ: ಗ್ರಾಮೀಣ ಪ್ರದೇಶದ ಸಂಗೀತ ಕಲಾವಿದರು ತಮ್ಮ ಹಾಡುಗಳ ಧ್ವನಿಸುರಳಿ ತಯಾರಿಕೆಗೆ ಬೇರೆಡೆ ತೆರಳುವುದನ್ನು ತಪ್ಪಿಸುವುದು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವುದು ಸೇರಿದಂತೆ ತಾವೇ ಸ್ವತಃ ವಚನ ಗಾಯನ, ಭಾವಗೀತೆ, ಮಕ್ಕಳ ಹಾಡು, ಜಾನಪದ ಗೀತೆಗಳ ಧ್ವನಿಸುರಳಿ ಹೊರತರಬೇಕು ಎಂಬ ಉದ್ದೇಶದಿಂದ ಸ್ವಗೃಹದ ಕೊಠಡಿಯೊಂದರಲ್ಲೇ ₨ 5.60 ಲಕ್ಷ ವೆಚ್ಚ ಮಾಡಿ ಸುಸಜ್ಜಿತ ರೆಕಾರ್ಡಿಂಗ್‌ ರೂಂ ಸಿದ್ಧಪಡಿಸಿದ್ದಾರೆ.

ಈಗಾಗಲೇ ಇವರ ರೆಕಾರ್ಡಿಂಗ್‌ ರೂಮ್‌ನಿಂದ ಹೊರ ಹೊಮ್ಮಿರುವ ’ನೀನಿರದ ಬದುಕು’ ಎಂಬ ಭಾವಗೀತೆಗಳ ಸಿ.ಡಿ. ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಸಾಧನೆಗೆ ಪತ್ನಿ ರಶ್ಮಿ ಸಾತ್‌ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.