ADVERTISEMENT

ಸಕ್ಕರೆ ಕಾರ್ಖಾನೆ ಶೀಘ್ರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:00 IST
Last Updated 14 ಫೆಬ್ರುವರಿ 2011, 9:00 IST

ಆಲಮೇಲ: ಸಿದ್ದೇಶ್ವರ ಸ್ವಾಮಿಗಳ ಆದೇಶದಂತೆ ನಾದ ಕೆ.ಡಿ. ಗ್ರಾಮದಲ್ಲಿ ಸ್ಥಾಪಿಸಿರುವ ಜಮಖಂಡಿ ಶುಗರ್ಸ್‌ ಸಂಸ್ಥೆಯ ಎರಡನೇ ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರ ಕಬ್ಬು ನುರಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಸಿದ್ದು ನ್ಯಾಮಗೌಡ ಭರವಸೆ ನೀಡಿದರು.

ಆಲಮೇಲದ ಗ್ರಾಮ ಪಂಚಾಯಿತಿಯ ಸಭಾ ಭವನದಲ್ಲಿ ಜರುಗಿದ ರೈತರ ಶೇರು ಸಂಗ್ರಹ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಕ್ಕರೆ ಕಾರ್ಖಾನೆಯ ಎರಡನೇ ಘಟಕದಲ್ಲಿ ಕಬ್ಬು ಕಟಾವು ಮಾಡಿ, ಯಂತ್ರಕ್ಕೆ ಹಾಕುವ ಯಂತ್ರಗಳ ಜೋಡಣೆ ಕಾಮಗಾರಿ ಕೆಲಸ ನಡೆಯುತ್ತಿದೆ. ಜನರ ಪ್ರೀತಿ, ವಿಶ್ವಾಸ, ಸಹಕಾರದಿಂದ ಅಭಿವೃದ್ಧಿ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ ಎಂದು ಹೇಳಿದರು.

ಸಿಂದಗಿ ಮತ್ತು ಇಂಡಿ ತಾಲ್ಲೂಕಿನ ವಿದ್ಯುತ್ ಸಮಸ್ಯೆ ನೀಗಿಸಲು ಕಾರ್ಖಾನೆಯಿಂದ 37 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಅದಕ್ಕಾಗಿ ಜರ್ಮನಿ, ಜಪಾನ ದೇಶಗಳಿಂದ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಲಾಗಿದೆ. ಪ್ರಾರಂಭದಲ್ಲಿ ಪ್ರತಿನಿತ್ಯ 5000 ಟನ್ ಕಬ್ಬು ನುರಿಸಲಾಗುವದು. ನಂತರ ಅದರ ಪ್ರಮಾಣ ಹೆಚ್ಚಿಸಲಾಗುವುದು. ರೈತರು ತಮ್ಮ ಜಮೀನಿನ ಪಹಣಿ ಹಾಗೂ ವಾಸ ಪ್ರಮಾಣ ಪತ್ರ ಸಲ್ಲಿಸಬೇಕು. ಯಾವುದೇ ಸಮಸ್ಯೆ ಅಥವಾ ಅನುಮಾನಗಳಿದ್ದರೆ ಕಾರ್ಖಾನೆ ಅಧಿಕಾರಿಗಳ ಜೊತೆಗೆ ಚರ್ಚಿಸಬೇಕು ಎಂದು ನುಡಿದರು.

ಇದೆ ಸಂದರ್ಭದಲ್ಲಿ ರೈತ ಬಸನಗೌಡ ಬಿರಾದಾರ 1 ಲಕ್ಷ ರೂ. ನೀಡಿ 10 ಶೇರುಗಳನ್ನು ಖರೀದಿಸಿದರು. ಸಭೆಯಲ್ಲಿ ರೈತರಿಂದ ಸುಮಾರು ಒಂದು ಕೋಟಿ ರೂಪಾಯಿ ಶೇರು ಸಂಗ್ರಹಿಸಲಾಯಿತು. ಬಸವರಾಜ ಧನಶ್ರೀ, ಶಿವಕುಮಾರ ಗುಂದಗಿ, ಡಾ. ಸಂದೀಪ ಪಾಟೀಲ, ಜಿ.ಪಂ.ಸದಸ್ಯ ಮಲ್ಲಪ್ಪ ತೋಡಕರ, ಡಾ. ಪ್ರಮೋದ ಮಹಾಜನ, ಶಿವಪುತ್ರ ಜೋಗೂರ, ಬಸವರಾಜ ದೇಸಾಯಿ, ಗಾಂದಿಗೌಡ ಪಾಟೀಲ, ರವಿ ಬಡದಾಳ, ರಾಜಹಮ್ಮದ ಬೆಣ್ಣಿಶಿರೂರ, ಬಾಬು ಕೊತಂಬರಿ, ರವಿ ವಾರದ, ಬಸವರಾಜ ಉಪ್ಪಿನ, ದವಲಪ್ಪ ಯಂಟಮಾನ, ಕಾರ್ಖಾನೆಯ ಎಮ್‌ಡಿ ಶ್ರೀನಿವಾಸನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.