ಇಂಡಿ: ಸರಕಾರ ಕೃಷಿ ರಂಗದಲ್ಲಿ ಚಿಕ್ಕ ಮತ್ತು ಅತಿ ಚಿಕ್ಕ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಬೀಜ, ಗೊಬ್ಬರ, ಸಹಾಯ ಧನ ಅಲ್ಲದೇ ಕೃಷಿ ಪರಿಕರಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಕರೆ ನೀಡಿದರು.
ಅವರು ಸೋಮವಾರ ಪಟ್ಟಣದ ಶ್ರೆ ಶಾಂತೇಶ್ವರ ಮಂಗಲ ಕಾರ್ಯಾಲಯ ದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಮಾತನಾಡಿದರು.
ಈ ಯೋಜನೆಯಲ್ಲಿ ಇಂಡಿ ತಾಲ್ಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ 390 ಫಲಾನುಭವಿಗಳಿಗೆ ಮತ್ತು ಸಾಮಾನ್ಯ ವರ್ಗಕ್ಕೆ 1052 ಫಲಾನು ಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಜೂನ್ ತಿಂಗಳಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹೋಬಳಿವಾರು ಬೀಜ, ಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ ಎಂದರು.
ಕೃಷಿ ಅಧಿಕಾರಿ ಪ್ರಕಾಶ ಚವ್ಹಾಣ ಮಾತನಾಡಿ ರೈತರಿಗೆ ಎಲ್ಲ ಸರಕಾರದ ಸೌಲಭ್ಯಗಳನ್ನು ಮುಟ್ಟಿಸಲು ಪ್ರಯತ್ನಿ ಸುವುದಾಗಿ ಹೇಳಿದರು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭೌರಮ್ಮ ಮುಳಜಿ, ಉಪಾಧ್ಯಕ್ಷೆ ದುಂಡವ್ವ ಹೂಗಾರ, ಪುರಸಭೆಯ ಅಧ್ಯಕ್ಷ ಯಮುನಾಜಿ ಸಾಳುಂಕೆ, ಉಪಾಧ್ಯಕ್ಷೆ ಭೀಮು ಪವಾರ, ಜಿಲ್ಲಾ ಪಂಚಾಯತಿ ಸದಸ್ಯೆಯರಾದ ಪದ್ಮಾವತಿ ಪಾಟೀಲ, ಸುನಂದಾ ವಾಲೀಕಾರ, ಸಂಜೀವ ಐಹೊಳ್ಳಿ, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷೆ ದಾನಮ್ಮ ಗೌಡತಿ ಪಾಟೀಲ, ತಾ.ಪಂ.ಸದಸ್ಯೆ ಶಶಿಕಲಾ ಪಾಟೀಲ, ಶಿವಾನಂದ ಧೂಳಖೇಡ, ರಜಿಯಾ ಬಗಲಿ, ಶ್ರೀಮಂತ ತಡಲಗಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.