ADVERTISEMENT

ಸಾರಾಯಿ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮೇ 2012, 6:20 IST
Last Updated 26 ಮೇ 2012, 6:20 IST

ಸಿಂದಗಿ: ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಸಾರಾಯಿ ಮಾರಾಟ ವಿಪರೀತವಾಗಿದ್ದು, ಕೂಡಲೇ ಸಾರಾಯಿ ಮಾರಾಟ ನಿಷೇಧಿಸಬೇಕು ಎಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ಶುಕ್ರವಾರ ಸಿಂದಗಿಯ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಶಬಾನಾ ಗುಂದಗಿ, ಗ್ರಾಮದ ಗಂಗೂಬಾಯಿ ಮಾದರ, ಲಲಿತಾಬಾಯಿ ಕೋಟಾರ ಗಸ್ತಿ, ಶೋಭಾ ಕೋಟಾರಗಸ್ತಿ, ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ರಾಜಾ ರೋಷವಾಗಿ ನಡೆದಿದ್ದು, ಈ ಬಗ್ಗೆ ನೂರಾರು ಮಹಿಳೆಯರನ್ನೊಳಗೊಂಡು ಸಾಕಷ್ಟು ಬಾರಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ.
 
ಪ್ರತಿಭಟನೆ ಮಾಡಿದ ದಿನದಂದು ಮಾರಾಟ ನಿಲ್ಲಿಸಿ ಪುನ: ಮಾರಾಟ ಆರಂಭಗೊಳ್ಳುತ್ತದೆ. ಸಾರಾಯಿ ಮಾರಾಟ ನಿಲ್ಲಿಸುವಂತೆ ಮಾರಾಟಗಾರರಿಗೆ ಕೇಳಿಕೊಂಡರೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಣ ಕೊಡುತ್ತೇವೆ ನಾವೇಕೆ ಸಾರಾಯಿ ಮಾರಾಟ ಮಾಡಬಾರದು ಎಂದು ನೇರವಾಗಿ ಹೇಳುತ್ತಾರೆ ಎಂದು ತಿಳಿಸಿದರು.
ಗ್ರಾಮದಲ್ಲಿನ ಸಾರಾಯಿ ಮಾರಾಟ ನಿಲ್ಲಿಸದಿದ್ದರೆ ಕರವೇ ನೇತೃತ್ವದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ತನ್ವೀರ ಭೈರಾಮಡಗಿ, ತಾಲ್ಲೂಕು ವಕ್ತಾರ ಶ್ರೀಕಾಂತ ವಿಜಾಪೂರ, ಬೋರಗಿ ಗ್ರಾಮ ಘಟಕದ ಅಧ್ಯಕ್ಷ ನಿಂಗರಾಜ ಸಾವಳಸಂಗ, ಮೌಸಿನ್ ನಾಟೀಕಾರ, ಬಬಲೂ ನಾಟೀಕಾರ, ಸುನೀಲ ಬಡಿಗೇರ, ಮಧೂ, ಮೈಬೂಬ ಮುಲ್ಲಾ, ಸರಸ್ವತಿ ಕೋಟಾರಗಸ್ತಿ, ಅಂಬವ್ವ ಮೂಲಿಮನಿ, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ, ಫಾರೂಕ ಮುಲ್ಲಾ, ಐ.ಎಂ.ನದಾಫ್, ಸುಭಾಷ ಜಾಲವಾದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.