ADVERTISEMENT

ಸಿಂದಗಿಯಲ್ಲಿ ಮಲ ಹೊರುವ ಪದ್ಧತಿ ಇಲ್ಲ: ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 4:07 IST
Last Updated 15 ಜುಲೈ 2013, 4:07 IST

ಸಿಂದಗಿ: ನಗರದ 17 ಮನೆಗಳಲ್ಲಿ ಒಣ ಶೌಚಾಲಯ (ಮಲ ಹೊರುವ ಪದ್ದತಿ) ಪದ್ಧತಿ ಅಸ್ತಿತ್ವದಲ್ಲಿ ಇದೆ ಎಂಬ ಗಣತಿ ವರದಿಯ ಹಿನ್ನಲೆಯಲ್ಲಿ ಭಾನುವಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ  ಸಿಂದಗಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿಯ ಅಶೋಕ ಚೌಕ್‌ನಲ್ಲಿರುವ ಸುರೇಶ ಹಳ್ಳೂರ ಮತ್ತು ಚಂದ್ರಶೇಖರ ಬುಯ್ಯಾರ ಇವರ ಮನೆಗೆ ಭೇಟಿ ನೀಡಿ ವಸ್ತುಸ್ಥಿತಿ ಸಮೀಕ್ಷೆ ಮಾಡಿದರು.

ಕಳೆದ ಜನಗಣತಿ ಸಂದರ್ಭದಲ್ಲಿ ಅರ್ಜಿ ನಮೂನೆಯಲ್ಲಿ ನಗರದ 17 ಮನೆಗಳಲ್ಲಿ ಮಲಹೊರುವ ಪದ್ಧತಿ ಇದೆ ಎಂದು ಭರ್ತಿ ಮಾಡಿದ ಕಾರಣಕ್ಕಾಗಿ ಸರ್ಕಾರದ ಗಮನಕ್ಕೆ ಬಂದ ತಕ್ಷಣವೇ ಈ ಬಗ್ಗೆ ಕ್ರಮ ಜರುಗಿಸುವಂತೆ ಯೋಜನಾನಿರ್ದೇಶಕಿ ಮಾನಕರ ಅವರಿಗೆ ಸೂಚನೆ ನೀಡಲಾಗಿತ್ತು.

ಜನಗಣತಿ ಅರ್ಜಿ ನಮೂನೆಯಲ್ಲಿ ತಪ್ಪಾಗಿ ಭರ್ತಿ ಮಾಡಿದ್ದಾರೆ ಎಂದು ಸುರೇಶ ಹಳ್ಳೂರ ಮತ್ತು ಚಂದ್ರಶೇಖರ ಬುಯ್ಯಾರ ತಮ್ಮ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ಯೋಜನಾನಿರ್ದೇಶಕಿ ಗಂಗೂಬಾಯಿ ಮಾತನಾಡಿ, ಮಲ ಹೊರುವ ಪದ್ದತಿ ಅತ್ಯಂತ ಗಂಭೀರ ಅಪರಾಧ ಎಂದರು.
ಈ ಪದ್ಧತಿ ಅನುಸರಿಸಿದರೆ ಕಠಿಣ ಶಿಕ್ಷೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ.

ಸಿಂದಗಿಯಲ್ಲಿ 17 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಪರಿಶೀಲಿಸಲಾಯಿತು. ವರದಿ ವರದಿ ಸುಳ್ಳು ಎಂಬುದು ಸಾಬೀತಾಗಿದೆ ಎಂದರು. ಈ ಕೆಟ್ಟ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಕ್ಕಾಗಿ ನಗರದ ಪುರಸಭೆಗಳಿಗೆ ಸರ್ಕಾರ ಸೆಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವುಳ್ಳ ವಾಹನಗಳನ್ನು ಒದಗಿಸಲಾಗಿದೆ. ಎಲ್ಲಿಯಾದರೂ ಇಂಥ ಪದ್ಧತಿ ಇರುವ ಬಗ್ಗೆ ಕಂಡುಬಂದರೆ  ತಮ್ಮ ಕಚೇರಿಗೆ ತಿಳಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎನ್. ಆರ್.ಮಠ, ಸದಸ್ಯ ಹಣಮಂತ ಸುಣಗಾರ, ಸುರೇಶ ಹಳ್ಳೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.