ADVERTISEMENT

ಸಿಂದಗಿ ಟಿಕೆಟ್‌; ಸಿಎಂ ಅಂಗಳಕ್ಕೆ

ಸಾರಿಗೆ ಸಚಿವ ರೇವಣ್ಣ ಸಂಬಂಧಿ ಡಾ.ಬಿ.ಮಂಜುಳಾರಿಂದ ತೀವ್ರ ಲಾಬಿ?

ಡಿ.ಬಿ, ನಾಗರಾಜ
Published 18 ಏಪ್ರಿಲ್ 2018, 11:35 IST
Last Updated 18 ಏಪ್ರಿಲ್ 2018, 11:35 IST

ವಿಜಯಪುರ: ರಾಜ್ಯ ವಿಧಾನಸಭಾ ಚುನಾವಣೆಗೆ ಎಐಸಿಸಿ ತನ್ನ ಮೊದಲ ಪಟ್ಟಿಯಲ್ಲೇ 218 ವಿಧಾನಸಭಾ ಕ್ಷೇತ್ರಗಳಿಗೆ ಹುರಿಯಾಳು ಪ್ರಕಟಿಸಿದೆ. ಉಳಿದ ಆರು ಕ್ಷೇತ್ರಗಳಲ್ಲಿ ವಿಜಯಪುರ ಜಿಲ್ಲೆಯ ಎರಡು ಕ್ಷೇತ್ರಗಳಿರುವುದು ವಿಶೇಷ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಪ್ರೊ.ರಾಜು ಆಲಗೂರ ಸ್ಪರ್ಧೆಗೆ ಹಿಂದೇಟು ಹಾಕಿದ್ದರಿಂದ ಅಭ್ಯರ್ಥಿ ಘೋಷಿಸದಿದ್ದರೇ; ಸಿಂದಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಕೊನೆ ಕ್ಷಣದಲ್ಲಿ ತಡೆಯಲ್ಪಟ್ಟಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

‘ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿನ ಹೊಣೆಯನ್ನು ಹೊತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಕುರುಬ ಸಮುದಾಯದ ಎಪಿಎಂಸಿ ಅಧ್ಯಕ್ಷ ಕೆಂಚಪ್ಪ ಕತ್ನಳ್ಳಿ ಹೆಸರನ್ನು ಅಂತಿಮಗೊಳಿಸಿದ್ದರು. ಎಐಸಿಸಿ ಅಧಿಕೃತ ಪ್ರಕಟಣೆ ಹೊರ ಬೀಳುವುದೊಂದೇ ಬಾಕಿಯಿತ್ತು. ಈ ವಿಷಯ ಅರಿತ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಸಂಬಂಧಿ, ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ.ಬಿ.ಮಂಜುಳಾ ಗೋವರ್ಧನ ಮೂರ್ತಿ ಅಂತಿಮ ಸಮಯದಲ್ಲಿ ತೀವ್ರ ಲಾಬಿ ನಡೆಸಿದ್ದರಿಂದ ಘೋಷಣೆಯಾಗಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಸಂಪುಟ ಸಹೋದ್ಯೋಗಿಯ ಒತ್ತಡಕ್ಕೆ ಒಳಗಾಗಿ ಸಿಂದಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯ ಪ್ರವೇಶಿಸಿದ್ದಾರೆ. ಮತ್ತೊಮ್ಮೆ ಆಕಾಂಕ್ಷಿಗಳ ವಿವರ ತರಿಸಿಕೊಂಡಿದ್ದಾರೆ. ಕೆಂಚಪ್ಪ ಕತ್ನಳ್ಳಿ ಹೆಸರಿನ ಜತೆಗೆ ಕುರುಬ ಸಮಾಜದ ಮುಖಂಡರಾದ ಬಸವಲಿಂಗಪ್ಪ ಗೊಬ್ಬೂರ, ಮಲ್ಲಣ್ಣ ಸಾಲಿ, ಡಾ.ಬಿ.ಮಂಜುಳಾ ಗೋವರ್ಧನ ಮೂರ್ತಿ ಹೆಸರನ್ನು ಪರಿಶೀಲನೆಗೊಳಪಡಿಸಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಮ್ಮ ಹಠಕ್ಕೆ ಜೋತು ಬಿದ್ದಿದ್ದಾರೆ. ಕೆಂಚಪ್ಪ ಕತ್ನಳ್ಳಿ ಹೆಸರು ಅಂತಿಮಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮಂಜುಳಾ ತನ್ನ ಬೆಂಬಲಿಗರ ಮೂಲಕ ಎಂ.ಬಿ.ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಂದಗಿ ಟಿಕೆಟ್‌ ಹಗ್ಗಜಗ್ಗಾಟ ಬಿರುಸಿನಿಂದ ನಡೆಸಿದೆ’ ಎನ್ನಲಾಗಿದೆ.

ಸಿಂದಗಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ನ್ನು ಕಾಂಗ್ರೆಸ್ ಈ ಬಾರಿ ಕುರುಬ ಸಮುದಾಯಕ್ಕೆ ನೀಡಲಿದೆ ಎಂಬ ಖಚಿತತೆ ಮೇರೆಗೆ ಮಂಜುಳಾ ಬೆಂಗಳೂರಿನಿಂದ ವಲಸೆ ಬಂದಿದ್ದರು. ಇಲ್ಲಿಯೇ ಮನೆ ಮಾಡಿಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸಾಮೂಹಿಕ ವಿವಾಹ ಸೇರಿದಂತೆ ಸಾಮಾಜಿಕ ಚಟುವಟಿಕೆಗಳ ಮೂಲಕ ಸ್ಥಳೀಯ ಮುಖಂಡರ ಒಲವು ಗಳಿಸಲು ಏಳೆಂಟು ತಿಂಗಳಿನಿಂದ ಕಸರತ್ತು ನಡೆಸಿದ್ದರು. ‘ಯಾವುದೇ ಕಾರಣಕ್ಕೂ ನನಗೆ ಈ ಬಾರಿ ಟಿಕೆಟ್‌ ಸಿಗಲ್ಲ ಎಂಬುದನ್ನು ಅರಿತ ಮಾಜಿ ಶಾಸಕ, ಹಿಂದಿನ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶರಣಪ್ಪ ಸುಣಗಾರ ಇದೀಗ ಮಂಜುಳಾ ಪರ ಬ್ಯಾಟಿಂಗ್‌ ನಡೆಸಿದ್ದಾರೆ. ಕೆಪಿಸಿಸಿ ವರಿಷ್ಠರ ಬಳಿ ಲಾಬಿ ಬಿರುಸುಗೊಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪರಿಷತ್‌ನತ್ತ ಸುಣಗಾರ ಚಿತ್ತ

ಮುಂಬರುವ ಜೂನ್‌ನಲ್ಲಿ ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಈಗಲೇ ವರಿಷ್ಠರ ಬಳಿ ಲಾಬಿ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಟಿಕೆಟ್‌ ಸಿಗಲ್ಲ ಎಂಬುದು ಖಚಿತಗೊಳ್ಳುತ್ತಿದ್ದಂತೆ, ಜಿಲ್ಲೆಯ ಎಲ್ಲ ಶಾಸಕರ ಜತೆ ಒಡನಾಟ ಹೊಂದಿದ್ದ ಸುಣಗಾರ, ಎಂ.ಬಿ.ಪಾಟೀಲ ಜತೆಯೂ ದೋಸ್ತಿ ಬೆಸೆದುಕೊಂಡಿದ್ದಾರೆ.

ಅವಿಭಜಿತ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪರ ಕೋಲಿ, ಕಬ್ಬಲಿಗ, ಗಂಗಾ ಮತಸ್ಥ ಸಮಾಜದ ಮತಗಳನ್ನು ಸೆಳೆಯಲು ಪ್ರಚಾರ ನಡೆಸುವೆ. ವಿಧಾನ ಪರಿಷತ್‌ಗೆ ಅವಕಾಶ ಕೊಡಿ ಎಂದು ಸುಣಗಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಮ್ಮುಖ ಹಕ್ಕೊತ್ತಾಯ ಮಂಡಿಸಿದ್ದು, ವರಿಷ್ಠರಿಂದ ಹಸಿರು ನಿಶಾನೆ ದೊರಕಿದೆ ಎನ್ನಲಾಗಿದೆ.

**

ಕಾಂಗ್ರೆಸ್ ನನಗೂ, ನನ್ನ ಸಮಾಜಕ್ಕೂ ಹಲ ಅವಕಾಶ ನೀಡಿದೆ. ಅವಿಭಜಿತ ಜಿಲ್ಲೆಯಲ್ಲಿ ಪ್ರಚಾರ ನಡೆಸಿ ಗೆಲುವಿಗೆ ಶ್ರಮಿಸುವೆ –  ಶರಣಪ್ಪ ಸುಣಗಾರ, ಮಾಜಿ ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.