ADVERTISEMENT

ಸಿಎಂ ಸಂಚರಿಸುವ ರಸ್ತೆಗಳಿಗಷ್ಟೇ ‘ತೇಪೆ ಭಾಗ್ಯ’!

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 5:12 IST
Last Updated 9 ಡಿಸೆಂಬರ್ 2013, 5:12 IST
ಸಿಎಂ ಸಂಚರಿಸುವ ರಸ್ತೆಗಳಿಗಷ್ಟೇ ‘ತೇಪೆ ಭಾಗ್ಯ’!
ಸಿಎಂ ಸಂಚರಿಸುವ ರಸ್ತೆಗಳಿಗಷ್ಟೇ ‘ತೇಪೆ ಭಾಗ್ಯ’!   

ವಿಜಾಪುರ:ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 10ರಂದು ನಗರಕ್ಕೆ ಮೂರು ತಾಸಿನ ಭೇಟಿ ನೀಡಲಿದ್ದಾರೆ. ಅವರು ಸಂಚರಿಸಲಿರುವ ರಸ್ತೆಗಳ ದುರಸ್ತಿ ನಡೆಯುತ್ತಿದೆ. ‘ಒಂದರ್ಥದಲ್ಲಿ ಇದು ತೇಪೆ ಹಚ್ಚುವ ಕೆಲಸ. ಗುಂಡಿಗಳನ್ನು ತುಂಬಿದ ಮರುದಿನವೇ ಮತ್ತೆ ಅವು ಬಾಯಿ ತೆರೆದುಕೊಂಡು ನಿಂತಿವೆ’ ಎಂದು ಜನ ಆಡಿಕೊಳ್ಳುತ್ತಿದ್ದಾರೆ.

ಈಗ ನಿಗದಿ ಆಗಿರುವ ಕಾರ್ಯಕ್ರಮದಂತೆ ಮುಖ್ಯಮಂತ್ರಿಗಳು ಇದೇ 10ರಂದು ಮಧ್ಯಾಹ್ನ 12.15ಕ್ಕೆ ಹೆಲಿಕಾಪ್ಟರ್‌ ಮೂಲಕ ಸೈನಿಕ ಶಾಲೆಯ ಹೆಲಿಪ್ಯಾಡ್‌ಗೆ ಬರುವರು. ಅಲ್ಲಿಂದ ಜಿಲ್ಲಾ ಪಂಚಾಯಿತಿ ಎದುರು ಇರುವ ಮಿನಿ ವಿಧಾನ ಸೌಧದ ಆವರಣದಲ್ಲಿ 12.15ರಿಂದ ಮಧ್ಯಾಹ್ನ 1ರ ವರೆಗೆ ಜನತಾ ದರ್ಶನ ನಡೆಸುವರು. ಮಧ್ಯಾಹ್ನ 1ರಿಂದ 2.15ರ ವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡುವರು. ಮಧ್ಯಾಹ್ನ 3.15ಕ್ಕೆ ನಗರದಿಂದ ತೆರಳುವರು.

‘ಮುಖ್ಯಮಂತ್ರಿಗಳು ಬರುತ್ತಾರೆ ಎಂಬ ಕಾರಣಕ್ಕೆ ಜಿಲ್ಲಾ ಪಂಚಾಯಿತಿ ರಸ್ತೆಯನ್ನು ಡಾಂಬರೀಕರಣ ಮಾಡಿದ್ದೇವೆ. ಜಿಲ್ಲಾ ಪಂಚಾಯಿತಿಗೂ ಸುಣ್ಣ–ಬಣ್ಣ ಬಳಿಯಲಾಗುತ್ತಿದೆ. ಸೈನಿಕ ಶಾಲೆಯಿಂದ ಜಿಲ್ಲಾ ಪಂಚಾಯಿತಿಗೆ ಅವರನ್ನು ಬೈಪಾಸ್‌ ಮೂಲಕ ಕರೆತರಲಾಗುವುದು. ಒಂದೊಮ್ಮೆ ಅವರು ಗಾಂಧಿಚೌಕ್‌ ಮಾರ್ಗವಾಗಿ ಬಂದರೆ ಎಂಬ ಭಯದಿಂದ ಬಸವೇಶ್ವರ ಚೌಕ್‌ನಿಂದ ಜಿಲ್ಲಾ ಪಂಚಾಯಿತಿ ವರೆಗಿನ ರಸ್ತೆಯಲ್ಲಿಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಅಧಿಕಾರಿಯೊಬ್ಬರು ಹೇಳಿದರು.

‘79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ₨30 ಕೋಟಿ ವೆಚ್ಚದಲ್ಲಿ ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಆ ರಸ್ತೆಗಳು ಎಲ್ಲಿವೆ ಎಂಬುದನ್ನು ಹುಡುಕಬೇಕಿದೆ. ನಗರದ ರಸ್ತೆಗಳಲ್ಲಿ ಗುಂಡಿ ಇವೆಯೋ, ಗುಂಡಿಗಳಲ್ಲಿಯೇ ರಸ್ತೆ ಇದೆಯೋ ಎಂಬುದು ಗೊತ್ತಾಗುವುದಿಲ್ಲ. ಅಷ್ಟೊಂದು ಹದಗೆಟ್ಟಿವೆ ಇಲ್ಲಿಯ ರಸ್ತೆಗಳು. ರಸ್ತೆಗಳು ಇಷ್ಟೂ ಹದಗೆಡಲು ಸಾಧ್ಯವೇ ಎಂಬುದನ್ನು ನೋಡಬೇಕಿದ್ದರೆ ಇಲ್ಲಿಯ ಸರಾಫ್‌ ಬಜಾರ್‌ ಸೇರಿದಂತೆ ಮಾರುಕಟ್ಟೆ ಪ್ರದೇಶಕ್ಕೆ ಬರಬೇಕು’ ಎನ್ನುತ್ತಾರೆ ವಿದ್ಯಾರ್ಥಿ ಮನೋಜ್‌ಕುಮಾರ.

‘ಮುಖ್ಯಮಂತ್ರಿಗಳು ಇಲ್ಲಿ ಜನತಾ ದರ್ಶನ–ಪ್ರಗತಿ ಪರಿಶೀಲನೆ ಏನೂ ಮಾಡುವುದು ಬೇಡ. ನಗರ ಪ್ರದಕ್ಷಿಣೆ ನಡೆಸಿ ಪುಣ್ಯ ಕಟ್ಟಿಕೊಳ್ಳಲಿ. ಮುಖ್ಯಮಂತ್ರಿ ಬರುತ್ತಾರೆ ಎಂಬ ಭಯದಿಂದಲಾದರೂ ನಗರದ ರಸ್ತೆಗಳು ರಿಪೇರಿ ಆಗಲಿ. ಇಲ್ಲವೆ ಈ ಅವ್ಯವಸ್ಥೆಗೆ ಕಾರಣರಾದವರ ಮೇಲೆ ಅವರು ಕ್ರಮ ಕೈಗೊಳ್ಳಲಿ’ ಎಂಬುದು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘು ಅಣ್ಣಿಗೇರಿ ಅವರ ಆಗ್ರಹ.

‘ನಗರದಲ್ಲಿ ಉತ್ತಮ ರಸ್ತೆ ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದೇವೆ. ಈ ವರೆಗೆ ಯಾರೊಬ್ಬರೂ ಒಂದೇ ಒಂದು ಒಳ್ಳೆಯ ರಸ್ತೆ ಹುಡುಕಿಕೊಟ್ಟು ಬಹುಮಾನ ಪಡೆದಿಲ್ಲ. ಏಕೆಂದರೆ ಎಷ್ಟೇ ಹುಡುಕಿದರೂ ನಗರದಲ್ಲಿ ಒಂದೇ ಒಂದು ಉತ್ತಮ ರಸ್ತೆ ಕಾಣುತ್ತಿಲ್ಲ’ ಎಂಬುದು ಅವರ ವ್ಯಂಗ್ಯ.

‘ನಗರೋತ್ಥಾನ ಯೋಜನೆಯಡಿ ಮೊದಲ ಕಂತಿನಲ್ಲಿ ವಿಜಾಪುರ ನಗರಕ್ಕೆ ₨100 ಕೋಟಿ ಅನುದಾನ ಬಂದಿದೆ. ಆ ಪೈಕಿ ₨ 10 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ₨13 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ ತಿರಸ್ಕೃತಗೊಂಡಿದ್ದು, ಪುನರ್‌ ಟೆಂಡರ್‌ ಕರೆಯುತ್ತಿದ್ದೇವೆ. ನಗರೋತ್ಥಾನದ ಎರಡನೇ ಕಂತಿನಲ್ಲಿ ₨100 ಕೋಟಿ ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಇದರಲ್ಲಿ ನಗರದ ಎಲ್ಲ ರಸ್ತೆಗಳು ದುರಸ್ತಿಯಾಗಲಿವೆ’ ಎಂಬುದು ನಗರಸಭೆ ಮೂಲಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.