ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಧರಣಿ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 5:25 IST
Last Updated 16 ಆಗಸ್ಟ್ 2012, 5:25 IST

ವಿಜಾಪುರ: ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಆಡಳಿತದವರು ತಮ್ಮನ್ನು ಅವಮಾನಿಸಿದರು ಎಂದು ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟಿಸಿದ ಘಟನೆ ಇಲ್ಲಿ ನಡೆಯಿತು.`ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸುವುದು ಸಂಪ್ರದಾಯ. ಜಿಲ್ಲಾ ಆಡಳಿತದ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಮ್ಮನ್ನು ಪೊಲೀಸ್ ಬಲ ಪ್ರಯೋಗಿಸಿ ಆಸನದಿಂದ ಎಬ್ಬಿಸಲಾಯಿತು~ ಎಂದ ಅವರು ದೂರಿದರು.

ಮಹಾದೇವಿ ಶಿಂಧೆ, ಭೀಮವ್ವ ಮನಗೂಳಿ, ಸಿದ್ದಮ್ಮ ರೆಬಿನಾಳ, ಭೀಮಾಬಾಯಿ ಮನಗೂಳಿ, ಕಾಳಮ್ಮ ಭೀ. ಪತ್ತಾರ, ಮಲ್ಲವ್ವ ಮುರನಾಳ ಮತ್ತಿತರರು ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದ ವೇದಿಕೆ ಎಡಬದಿಯ ಆಸನದಲ್ಲಿ ಆಸೀನಗಾರಿದ್ದರು.

`ಇದು ನಿಮ್ಮ ಜಾಗೆ ಅಲ್ಲ. ಇಲ್ಲಿ ಕೇವಲ ಸನ್ಮಾನಿತರು ಮಾತ್ರ ಕುಳಿತು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸನ್ಮಾನಿತರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ನೀವು ಈ ಆಸನ ಬಿಟ್ಟು ಏಳಲೇಬೇಕು ಎಂದು ಪೊಲೀಸರು ಒತ್ತಾಯಿಸಿದರು. ನಾವು ಸ್ವಾತಂತ್ರ್ಯ ಯೋಧರು ಎಂದು ಗುರುತಿನ ಚೀಟಿ ತೋರಿಸಿದರೂ ಕೇಳದೆ ಅಲ್ಲಿಂದ ಎಬ್ಬಿಸಿಯೇ ಬಿಟ್ಟರು~ ಎಂದು ಅವರೆಲ್ಲ ಆಪಾದಿಸಿದರು.

ಸಾಧಕ ಕ್ರೀಡಾಪಟುಗಳು, ಸಮಾಜ ಸೇವಕರನ್ನು ಮಾತ್ರ ಜಿಲ್ಲಾ ಆಡಳಿತ ದಿಂದ ಸನ್ಮಾನಿಸಲಾಯಿತು. ಆದರೆ, ಈ ಹಿರಿಯ ಜೀವಗಳಿಗೆ ಪ್ರತಿ ವರ್ಷದಂತೆ ಸನ್ಮಾನದ ಭಾಗ್ಯ ಕೂಡಿ ಬರಲಿಲ್ಲ.  ಕುಪಿತಗೊಂಡ ಈ ಸ್ವಾತಂತ್ರ್ಯ ಹೋರಾಟಗಾರರು ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ  ಪ್ರತಿಭಟಿಸಿದರು.

ವಿಷಯ ತಿಳಿದು ಅಲ್ಲಿಗೆ ಧಾವಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, `ಅಚಾತುರ್ಯದಿಂದ ಈ ಘಟನೆ ನಡೆದಿದೆ. ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ~ ಎಂದು ಕೈಮುಗಿದು ಬೇಡಿಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.