ADVERTISEMENT

ಕ್ಷೀರಕ್ರಾಂತಿಯತ್ತ ಮುಂದಿನ ಹೆಜ್ಜೆ: ಎಂ.ಬಿ.ಪಾಟೀಲ

ವಿಜಯಪುರದಲ್ಲಿ ವಿಜೃಂಭಣೆಯಿಂದ ಜರುಗಿದ ಕರ್ನಾಟಕ ರಾಜ್ಯೋತ್ಸವ  

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 6:11 IST
Last Updated 2 ನವೆಂಬರ್ 2025, 6:11 IST
ವಿಜಯಪುರ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು– ಪ್ರಜಾವಾಣಿ ಚಿತ್ರ 
ವಿಜಯಪುರ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು– ಪ್ರಜಾವಾಣಿ ಚಿತ್ರ     

ವಿಜಯಪುರ: ಕೋಟಿವೃಕ್ಷ ಆಂದೋಲನದ ಮೂಲಕ ಈಗಾಗಲೇ 1.5 ಕೋಟಿ ಸಸಿಗಳನ್ನು ನೆಟ್ಟು ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಮಾಡಲಾಗಿದೆ. ಜೊತೆಗೆ ಜಲ ಸಂಪನ್ಮೂಲ ಸಚಿವನಾಗಿ ಜಲ ಕ್ರಾಂತಿಯನ್ನೂ ಮಾಡಲಾಗಿದೆ. ಕ್ಷೀರ ಕ್ರಾಂತಿಯತ್ತ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರದ ಶರದ್‌ ಪವಾರ್‌ ಅವರ ಬಾರಾಮತಿ ಕ್ಷೇತ್ರದಂತೆ ವಿಜಯಪುರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿಗೆ ನಿಯೋಗ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯವಾಗಿ ಹಾಗೂ ಪ್ರಸ್ತಾವಿತ ಪಿಪಿಪಿ ಮಾದರಿ ಕೈಬಿಡುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಜೊತೆ ಚರ್ಚಿಸಿದ್ದೇನೆ ಎಂದರು.

ADVERTISEMENT

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ 45 ದಿನಗಳಿಂದ ವಿಜಯಪುರದಲ್ಲಿ ಧರಣಿ ನಡೆಸುತ್ತಿರುವ ಹೋರಾಟಗಾರರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿಸಲಾಗುವುದು ಎಂದರು.

ಕನ್ನಡ ಭವನ ಶೀಘ್ರ:

ವಿಜಯಪುರದಲ್ಲಿ ₹4 ಕೋಟಿ ಅನುದಾನದಲ್ಲಿ ಶೀಘ್ರದಲ್ಲೇ ಕನ್ನಡ ಭವನ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.

ಭಯ ಬೇಡ:

ಜಿಲ್ಲೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಲಘು ಭೂಕಂಪನದ ಬಗ್ಗೆ ಜನರು ಗಾಬರಿಯಾಗುವ ಅಗತ್ಯ ಇಲ್ಲ, ಇದೊಂದು ನೈಸರ್ಗಿಕ ಪ್ರಕ್ರಿಯೆ ಎಂದು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಜಿಲ್ಲೆಗೆ ಕೈಗಾರಿಕೆ:  

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವರು, ಮುಳವಾಡ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ ಹಂತ-2 ರಲ್ಲಿ ರಿಲಯನ್ಸ್ ಕಂನ್ಸೂಮರ್ ಪ್ರೊಡಕ್ಟ್ ಲಿಮಿಟೆಡ್‌  ₹1622 ಕೋಟಿ ವೆಚ್ಚದಲ್ಲಿ 1200 ಉದ್ಯೋಗ ಕಲ್ಪಿಸಲಿರುವ ಪ್ಯಾಕೇಜ್ಡ್ ಕಾರ್ಬೊನೇಟೆಡ್ ಸಾಫ್ಟ್‌ ಡ್ರಿಂಕ್ಸ್ ಮತ್ತು ಡ್ರಿಂಕಿಂಗ್ ವಾಟರ್ ಸ್ಥಾಪಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ತಿಳಿಸಿದರು.

ಅಮೃತ್‌ 2.0 ಯೋಜನೆಯಡಿ ಹಂಚಿಕೆಯಾಗಿರುವ ₹ 25 ಕೋಟಿ ಪೈಕಿ ₹ 20 ಕೋಟಿ ವೆಚ್ಚದಲ್ಲಿ ಬೇಗಂ ತಲಾಬ್ ಹಾಗೂ ಭೂತನಾಳ ಕೆರೆಗಳನ್ನು ಪುನಃಶ್ಚೇತನಗೊಳಿಸುವ ಹಾಗೂ ಸೌಂದರ್ಯೀಕರಣ ಕಾಮಗಾರಿಗೆ ಡಿ.ಪಿ.ಆರ್ ಅನುಮೋದನೆ ಹಂತದಲ್ಲಿರುತ್ತದೆ ಹಾಗೂ ಇನ್ನೂಳಿದ ₹ 5 ಕೋಟಿ ವೆಚ್ಚದಲ್ಲಿ 10 ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಸಂಬಂಧ ಟೆಂಡರ್ ಆಹ್ವಾನಿಸಲಾಗಿದೆ ಎಂದರು.

ಶಾಸಕ ವಿಠ್ಠಲ ಕಟಕಧೋಂಡ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಮೇಯರ್ ಎಂ.ಎಸ್‌. ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಾನ್ ಮುಶ್ರೀಪ್, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ,  ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.