ADVERTISEMENT

ವಿಜಯಪುರ: ₹2.33 ಕೋಟಿ ಮೊತ್ತದ ವಸ್ತು ಹಸ್ತಾಂತರ

ಮನೆ ಕಳವು, ದರೋಡೆ, ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 14:35 IST
Last Updated 29 ನವೆಂಬರ್ 2021, 14:35 IST
ಎಚ್‌.ಡಿ.ಆನಂದಕುಮಾರ್‌
ಎಚ್‌.ಡಿ.ಆನಂದಕುಮಾರ್‌   

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಮತ್ತು ಪ್ರಸ್ತುತ ಸಾಲಿನಲ್ಲಿ ನಡೆದಿರುವ ಮನೆ ಕಳವು, ದರೋಡೆ, ಸುಲಿಗೆ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡ ಚಿನ್ನಾಭರಣ, ವಾಹನ, ಹಣ, ಬೈಕು ಸೇರಿದಂತೆ ಇತರೆಬೆಲೆ ಬಾಳುವ ವಸ್ತುಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿಒಟ್ಟು 252 ಪ್ರಕರಣಗಳಿಗೆ ಸಂಬಂಧಿಸಿದಂತೆ ₹2,33,17,339 ಮೊತ್ತದ ವಸ್ತುಗಳನ್ನು ಹಸ್ತಾಂತರಿಸುವ ಮೂಲಕ ವಾರಸುದಾರರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದರು.

₹68,97,604 ಮೊತ್ತದ 2 ಕೆಜಿ 216 ಗ್ರಾಂ ಬಂಗಾರದ ಆಭರಣ, ₹11,85,900 ಮೊತ್ತದ 4ಕೆ.ಜಿ. 530 ಗ್ರಾಂ ಬೆಳ್ಳಿಯ ಆಭರಣ, ₹5,21,350 ನಗದು, ₹52,40,300 ಬೆಲೆ ಬಾಳುವ 110 ಬೈಕುಗಳು, ₹53.07 ಲಕ್ಷ ಮೌಲ್ಯದ 12 ವಾಹನಗಳು, ₹7.56 ಲಕ್ಷ ಮೊತ್ತದ 29 ಜಾನುವಾರುಗಳು ಹಾಗೂ ₹34,09,185 ಮೊತ್ತದ ಇತರೆ ಸಾಮಗ್ರಿಗಳನ್ನು ಸಂಬಂಧ ಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ADVERTISEMENT

ಕಳವು, ದರೋಡೆ, ಸುಲಿಗೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮುಖ್ಯ ಪಾತ್ರ ವಹಿಸಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗದು ಬಹುಮಾನ, ಪ್ರಶಂಸೆ ಪತ್ರ ನೀಡಿ ಅಭಿನಂದಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ದಿ, ವಿಜಯಪುರ ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ, ಇಂಡಿ ಡಿವೈಎಸ್‌ಪಿ ಶ್ರೀಧರ ದೊಡ್ಡಿ, ಬಸವನ ಬಾಗೇವಾಡಿ ಡಿವೈಎಸ್‌ಪಿ ಅರುಣಕುಮಾರ ಕೋಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.