ADVERTISEMENT

34 ಸಾವಿರ ಹೆಕ್ಟೇರ್‌ಗೆ ನೀರಾವರಿ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 7:50 IST
Last Updated 4 ಅಕ್ಟೋಬರ್ 2012, 7:50 IST

ವಿಜಾಪುರ: `ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೂ.730 ಕೋಟಿ ವೆಚ್ಚದಲ್ಲಿ 1710 ಕಾಮಗಾರಿ ಕೈಗೆತ್ತಿಕೊಂಡು 33,558 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ~ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.

ಸಮುದಾಯ ಏತ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 5500 ಕುಟುಂಬಗಳ ಜಮೀನುಗಳಿಗೆ ನೀರು ಕೊಡಲಾಗಿದೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

56 ಜಿನುಗು ಕೆರೆಗಳನ್ನು  ನಿರ್ಮಿಸಲಾಗಿದೆ. ಇದಕ್ಕೆ ರೂ.38.43 ಕೋಟಿ ವ್ಯಯಿಸಲಾಗಿದ್ದು, 6442 ಹೆಕ್ಟೇರ್ ಪ್ರದೇಶಕ್ಕೆ ಪರೋಕ್ಷವಾಗಿ ನೀರಾವರಿ ಸೌಲಭ್ಯ ದೊರೆತಿದೆ. ರೂ.77.46 ಕೋಟಿ ವೆಚ್ಚದಲ್ಲಿ 81 ಬ್ಯಾರೇಜ್, ಬಾಂದಾರ ನಿರ್ಮಿಸಿ 9852 ಹೆಕ್ಟೇರ್‌ಗೆ ನೀರಾವರಿ ಕಲ್ಪಿಸಲಾಗಿದೆ. ನದಿ ಹಾಗೂ ಹಳ್ಳಗಳಿಗೆ 39 ಬ್ರಿಜ್ ಕಂ ಬ್ಯಾರೇಜ್‌ಗಳನ್ನು ರೂ.85.70 ಕೋಟಿ ವೆಚ್ಚದಲ್ಲಿ ನಿರ್ಮಿಸಿ 4756 ಹೆಕ್ಟೇರ್‌ಗೆ ನೀರಾವರಿ ಕಲ್ಪಿಸಲಾಗಿದೆ.

ರೂ.86 ಕೋಟಿ ವೆಚ್ಚದ ಕಾರ ಜೋಳ ಯೋಜನೆಯೂ ಸೇರಿದಂತೆ 157.53 ಕೋಟಿ ವೆಚ್ಚದಲ್ಲಿ 12 ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, 3531 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ನಂಜುಂಟಪ್ಪ ವರದಿ ಪ್ರಕಾರ 51 ಕೋಟಿ ವೆಚ್ಚದಲ್ಲಿ 56 ಕಾಮಗಾರಿ, ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯವರಿಗೆ 1018 ಸಮುದಾಯ ಏತ ನೀರಾವರಿ ಯೋಜನೆಗಳನ್ನು 198 ಕೋಟಿ ವೆಚ್ಚದಲ್ಲಿ ಹಾಗೂ ಪರಿಶಿಷ್ಟ ಪಂಗಡದವರಿಗೆ 383 ಸಮುದಾಯ ಏತ ನೀರಾವರಿ ಯೋಜನೆಗಳನ್ನು ರೂ.68 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

13ನೇ ಹಣಕಾಸು ಯೋಜನೆಯಲ್ಲಿ 32 ಕೆರೆ ಮತ್ತು ಬಾಂದಾರಗಳಿಗೆ ರೂ.45 ಕೋಟಿ ಮಂಜೂರಾಗಿದ್ದು, ಕೆಲಸ ನಡೆಯುತ್ತಿದೆ. 1710ರಲ್ಲಿ 849 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವು ಪ್ರಗತಿಯಲ್ಲಿವೆ ಎಂದರು.

ಸಮಗ್ರ ಯೋಜನೆ:
ಕೃಷ್ಣಾ ಕಣಿವೆಯ ಹಳೆಯ 10 ಜಿಲ್ಲೆಗಳಲ್ಲಿ ಹೊಸದಾಗಿ ಬಾಂದಾರ, ಬ್ಯಾರೇಜ್ ನಿರ್ಮಿಸಲು 2600 ಸ್ಥಗಳನ್ನು ಗುರುತಿಸಿ ಸಮಗ್ರವಾದ ಯೋಜನೆ ತಯಾರಿಸಿ ಮುಖ್ಯ ಮಂತ್ರಿಗಳಿಗೆ ಎರಡು ವರ್ಷಗಳ ಹಿಂದೆ ಸಲ್ಲಿಸಲಾಗಿದೆ. ಅಂದಾಜು ರೂ.2000 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಹಣಕಾಸಿನ ಲಭ್ಯತೆ ಇಲ್ಲದ್ದರಿಂದ ವಿಳಂಬವಾಗಿದೆ ಎಂದರು.

ಈ ಯೋಜನೆ ಜಾರಿಯಾದರೆ ಮಳೆಗಾಲದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿ ಹೆಚ್ಚಿನ ಪ್ರದೇಶ ನೀರಾವರಿಗೊಳಪಡಲಿದೆ ಎಂದು ಹೇಳಿದರು.

ಹೊಸ ಜಿಲ್ಲೆ:

ಹೊಸ ಜಿಲ್ಲೆಗಳನ್ನು ರಚಿಸಬೇಕು ಎಂಬ ಬೇಡಿಕೆ ಇದೆ. ಆದರೆ, ಸರ್ಕಾರದ ಮಟ್ಟದಲ್ಲಿ ಅಂತಹ ಯಾವುದೇ ಚಿಂತನೆ ನಡೆದಿಲ್ಲ. ಜಮಖಂಡಿ ಜಿಲ್ಲಾ ಕೇಂದ್ರ ರಚಿಸಬೇಕು ಎಂಬ ಕೂಗು ಎದ್ದಿದೆ. ಹೊಸ ಜಿಲ್ಲೆಗಳನ್ನು ಮಾಡಬೇಕಾದರೆ ನೆರೆ ಜಿಲ್ಲೆಗಳ ತಾಲ್ಲೂಕುಗಳನ್ನು ಪುನರ್ ಹೊಂದಾಣಿಕೆ ಮಾಡಬೇಕಾಗುತ್ತದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.