ADVERTISEMENT

ದಲಿತ ಮಹಿಳೆ ಸಾವು ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 7:21 IST
Last Updated 11 ಜನವರಿ 2018, 7:21 IST
ವಿಜಯಪುರದ ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದುಷ್ಕರ್ಮಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮುಂಡರಗಿ ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ವಿಜಯಪುರದ ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ದುಷ್ಕರ್ಮಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮುಂಡರಗಿ ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.   

ಮುಂಡರಗಿ: ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಅವಳನ್ನು ಕೊಲೆಗೈದಿರುವ ದುಷ್ಕರ್ಮಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಕಾಲೇಜಿನಿಂದ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ದುಷ್ಕರ್ಮಿಗಳ ವಿರುದ್ಧ ಘೋಷಣೆ ಕೂಗುತ್ತಾ ಕೊಪ್ಪಳ ವೃತ್ತಕ್ಕೆ ಆಗಮಿಸಿದರು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಾರ್ಯಾಲಯ ತಲುಪಿದರು.

ಮುಖಂಡ ಸಂತೋಷ ಹಿರೇಮನಿ ಮಾತನಾಡಿ, ‘ರಾಜ್ಯದ ವಿವಿಧ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಈಚೆಗೆ ಹೆಚ್ಚುತ್ತಿವೆ. ಇರಿಂದ ದಲಿತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅತ್ಯಾಚಾರ ಹಾಗೂ ಕೊಲೆಯಂತಹ ಹೀನ ಕೃತ್ಯಗಳಲ್ಲಿ ತೊಡಗುವವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಹತ್ಯೆಗೆ ಒಳಗಾಗಿರುವ ದಾನಮ್ಮಳ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಮತ್ತು ಕುಟುಂಬದ ಯಾರಾದರು ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ನೇತ್ರಾ ಪತ್ತಾರ, ಸಂಜಯ ಕಲ್ಯಾಣಿ, ಪವನ ಮೇಟಿ, ವರ್ಷಾ ಸೂರ್ಯಭಟ್, ಅನಿತಾ ತಳವಾರ, ಮಹೇಶ ಭಜಂತ್ರಿ,ಗಂಗಾಧರ ಹಾತಲಗೇರಿ, ಸೈಯದ್ ಆಲೂರ, ಮಹೇಶ ವಡ್ಡರ, ಶಾಂತಕುಮಾರ ಗಡಾದ, ಸುನೀಲ ಉಳ್ಳಾಗಡ್ಡಿ, ಶ್ರೀಧರ ಮುದ್ದಿ, ಸುನಿತಾ ಹಲವಾಗಲಿ, ಶಿಲ್ಪಾ ಪಾಟೀಲ, ನೀಲಮ್ಮ ಮಡ್ಡಿ, ದೀಪಾರಾಮೇನಹಳ್ಳಿ, ಸಲೀಂ ಅಡವಿಸೋಮಾಪುರ, ಹುಲಿಗೆವ್ವ ಮಲ್ಲಾರ್ಜಿ, ಭಾರತಿ ಹಂದ್ರಾಳ, ಪವಿತ್ರಾ ಹಿರೇಮಠ ಇದ್ದರು.

ಶೋಷಣೆ ತಡೆಗೆ ಆಗ್ರಹ
ರೋಣ:
ಮುಂಡರಗಿ ತಾಲ್ಲೂಕಿನ ಸಿಂಗಟಾಲೂರಿನ ದಲಿತ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿ, ರೋಣ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.

ಪಟ್ಟಣದ ಸೂಡಿ ವೃತ್ತ, ಮುಲ್ಲಾನಭಾವಿ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಗೆ ರೈತಪರ ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಪ್ರತಿಭಟನೆಯ ಕಾವು ಹೆಚ್ಚಿತ್ತು.

ಗದಗ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಸಂಜಯ ದೊಡ್ಡಮನಿ ಮಾತನಾಡಿ, ದೇಶದಾದ್ಯಂತ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ದಲಿತರಿಗೆ ರಾಜ್ಯದಲ್ಲಿ ಭದ್ರತೆಯೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ರಾಜ್ಯ ಘಟಕದ ಉಪಾಧ್ಯಕ್ಷೆ ಲೀಲಾ ಚಿತ್ರಗಾರ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ದುಷ್ಕರ್ಮಿಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪ್ರಕಾಶ ಹೊಸಳ್ಳಿ, ಮಂಜುನಾಥ ಹಾಳಕೇರಿ, ಜಿಲ್ಲಾ ಪಂಚಾಯ್ತಿ ಸದಸ್ಯ ಪಡಿಯಪ್ಪ ಪೂಜಾರ, ಸಂಗಪ್ಪ ಹೊಸಮನಿ, ಹನುಮಂತಪ್ಪ ದ್ಯಾಮುನಸಿ, ಬಾಲಪ್ಪ ಮಾದರ, ದೇವೆಂದ್ರಪ್ಪ ಕೊಳಪ್ಪನವರ, ಮಲ್ಲಪ್ಪ ಮಾದರ, ಶಿವಪ್ಪ ಮಾದರ, ಭರತ ಹಾದಿಮನಿ, ಭೀಮಪ್ಪ ಮಾದರ ಇದ್ದರು.

*

ದಲಿತ ಮಹಿಳೆ ಸಾವು ಪ್ರಕರಣ: ಸಿಡಿಗೆ ವಹಿಸಲು ಆಗ್ರಹ
ಗದಗ
: ‘ಮುಂಡರಗಿ ತಾಲ್ಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಆರೋಪಿತರ ರಕ್ಷಣೆಗೆ ಮುಂದಾಗಿದೆ. ಕೂಡಲೇ ಇದನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು’ ಎಂದು ಸಿಂಗಟಾಲೂರು ದಲಿತ ಮಹಿಳೆ ಹತ್ಯೆ ವಿರೋಧಿ ಹೋರಾಟ ಸಮಿತಿಯ ಬಸವರಾಜ ಸೂಳಿಬಾವಿ ಆಗ್ರಹಿಸಿದರು.

ಮೃತ ಮಹಿಳೆಯ ಕುಟುಂಬ ಸದಸ್ಯರ ಜತೆ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟನೆ ನಡೆದ ದಿನ ಮುಂಡರಗಿ ಸಿಪಿಐ ಇದನ್ನು ಆತ್ಮಹತ್ಯೆ ಪ್ರಕರಣ ಎಂದು ಎಫ್‍.ಐ.ಆರ್ ದಾಖಲಿಸಿದ್ದರು. ಇದೀಗ ಅದನ್ನು ತಿದ್ದುಪಡಿ ಮಾಡಿ, ಕೊಲೆ ಅಂತ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆಯ ನಡೆ ಸಂಶಯ ಮೂಡಿಸಿದೆ’ ಎಂದರು.

ಘಟನೆ ನಡೆದ 24 ಗಂಟೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಮೃತಳ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ಆದರೆ, ಘಟನೆ ನಡೆದು ವಾರ ಕಳೆದರೂ ಈವರೆಗೂ ಯಾವುದೇ ಅಧಿಕಾರಿ ಬಂದಿಲ್ಲ. ಮಹಿಳಾ ಆಯೋಗ ಕೂಡ ಮೌನ ವಹಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೃತ ಮಹಿಳೆಯ ತಾಯಿಗೆ ಪಿಂಚಣಿ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಕೊಡಬೇಕು. ದಲಿತ ಕೇರಿಯ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಮೀಕ್ಷೆ ನಡೆಸಿ, ಸೂಕ್ತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳ ವಿಚಾರಣೆಗೆ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮೃತ ಮಹಿಳೆ ತಾಯಿ ಸಣ್ಣತಂಗೆವ್ವ, ಪ್ರೊ.ಬಸವರಾಜ ಪೂಜಾರ, ಶರೀಫ ಬಿಳೆಯಲಿ, ರಮೇಶ ಕೋಳೂರ, ಮುತ್ತು ಬಿಳೆಯಲಿ, ವಸಂತ ಚೌಡಣ್ಣವರ, ಬಸವರಾಜ ಈರಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.