ADVERTISEMENT

‘ಪ್ರಧಾನಿ ಬಳಿ ನಿಯೋಗ; ಸಮಯ ವ್ಯರ್ಥ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 8:47 IST
Last Updated 27 ಜನವರಿ 2018, 8:47 IST

ವಿಜಯಪುರ: ‘ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಬಳಿ ಸರ್ವ ಪಕ್ಷದ ನಿಯೋಗ ಕರೆದೊಯ್ಯುವುದು ಸಮಯ ವ್ಯರ್ಥದ ಕಸರತ್ತು’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ಉತ್ಸುಕರಾಗಿದ್ದಾರೆ. ಆದರೆ, ಈ ಹಿಂದಿನ ಘಟನಾವಳಿಗಳನ್ನು ಅವಲೋಕಿಸಿದರೆ ವ್ಯರ್ಥ ಪ್ರಯತ್ನ ಎಂಬುದು ನಮಗೆ ಈಗಾಗಲೇ ಮನದಟ್ಟಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೈಸೂರಿನಲ್ಲಿ ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಅಮಿತ್‌ ಶಾ ಮಹದಾಯಿ ಕುರಿತಂತೆ ಚಕಾರ ಎತ್ತಿಲ್ಲ. ಈ ಮಹಾನಾಟಕ ಆರಂಭಗೊಂಡಿದ್ದೇ ಶಾ ನೇತೃತ್ವದಲ್ಲಿ ಎಂಬುದನ್ನು ಯಾರೂ ಮರೆತಿಲ್ಲ’ ಎಂದರು.

ADVERTISEMENT

‘ಬಂದ್‌ನಲ್ಲಿ ಕಾಂಗ್ರೆಸ್ಸಿಗರ ಪಾತ್ರವಿಲ್ಲ. ಗೋವಾ ಜಲಸಂಪನ್ಮೂಲ ಸಚಿವ ರಾಜ್ಯ ಪ್ರವೇಶಿಸಿ ನಮ್ಮ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಲು ಶಾ, ಯಡಿಯೂರಪ್ಪ, ಮನೋಹರ್‌ ಪರ್ರೀಕರ್‌ ನಡೆಸಿದ ಮಹಾನಾಟಕವೇ ಕಾರಣ’ ಎಂದು ಬಿಜೆಪಿ ಮುಖಂಡರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

‘ಗೋವಾ ಪರ ವಕೀಲ ಆತ್ಮಾರಾಂ ನಾಡಕರ್ಣಿ ಹೇಳಿಕೆಯಂತೆ 0.1 ಟಿಎಂಸಿ ಅಡಿ ನೀರು ಪಡೆದುಕೊಳ್ಳಲು ನಾವೇನೂ ಭಿಕ್ಷುಕರಲ್ಲ. ನ್ಯಾಯಕ್ಕಾಗಿ ಹೋರಾಟ ನಡೆದಿದೆ. ನ್ಯಾಯಮಂಡಳಿಯಲ್ಲಿ ನಡೆಯುತ್ತಿರುವ ವಿಚಾರಣೆಯತ್ತ ನಮ್ಮ ಚಿತ್ತ ನೆಟ್ಟಿದೆ’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.