ADVERTISEMENT

₹ 10 ಸಾವಿರ ಕೋಟಿ ವೆಚ್ಚದಲ್ಲಿ 3500 ಕೆರೆಗೆ ನೀರು

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 8:15 IST
Last Updated 30 ಜನವರಿ 2018, 8:15 IST
ವಿಜಯಪುರ ತಾಲ್ಲೂಕಿನ ಐತಿಹಾಸಿಕ ಮಮದಾಪುರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿದ ನಂತರ ನಡೆದ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು
ವಿಜಯಪುರ ತಾಲ್ಲೂಕಿನ ಐತಿಹಾಸಿಕ ಮಮದಾಪುರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿದ ನಂತರ ನಡೆದ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು   

ವಿಜಯಪುರ: ‘ಹೊಸಪೇಟೆಯಿಂದ ಕೂಡಲ ಸಂಗಮದವರೆಗೆ ಪಾದಯಾತ್ರೆ ಮಾಡಿ, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ನೀಡುತ್ತೇವೆ ಎಂದು ಹೇಳಿದ್ದ ನಾವು, ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಐತಿಹಾಸಿಕ ಮಮದಾಪುರ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ‘ಈ ಭಾಗದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ರಾಮಥಾಳ ಹನಿ ನೀರಾವರಿ ಯೋಜನೆಯನ್ನು ನನ್ನ ಅವಧಿಯಲ್ಲಿಯೇ ಆರಂಭಿಸಿ, ಮುಕ್ತಾಯಗೊಳಿಸಿದ್ದೇನೆ’ ಎಂದರು.

‘ಹನಿ ನೀರಾವರಿಯ ಮೂಲಕ ರೈತರ ಬೆಳೆಗಳಿಗೆ ನೀರು ಕೊಟ್ಟಿದ್ದೇವೆ. ಕೆರೆ ತುಂಬುವ ಯೋಜನೆಗಳಿಗಾಗಿ ₹ 10000 ಸಾವಿರ ಕೋಟಿ ಅನುದಾನ ನೀಡಿ, ರಾಜ್ಯದಾದ್ಯಂತ 3500 ಕೆರೆಗಳನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ’ ಎಂದು ಹೇಳಿದರು.

ADVERTISEMENT

‘ಕೆರೆಗಳಿಗೆ ನೀರು ತುಂಬಿಸುವುದು ಪುಣ್ಯದ ಕಾರ್ಯ, ಕೆರೆಯನ್ನು ಉಪಯೋಗಿಸುವ ಪಶು-, ಪಕ್ಷಿ, -ಪ್ರಾಣಿಗಳ ದಯೆ ನಿಮ್ಮ ಮೇಲೆ ಇರುತ್ತದೆ ಎಂದು ಈ ಹಿಂದೆ ನವದೆಹಲಿಯ ಹಜರತ್ ನಿಜಾಮುದ್ದೀನ್ ದರ್ಗಾದ ಪೀಠಾಧೀಶರು ನನಗೆ ಹೇಳಿದ್ದರು. ಅದರಂತೆ ಒಣಗಿ ನಿಂತಿದ್ದ ಕೆರೆಗಳಿಗೆ ನೀರು ತುಂಬಿಸುವ ಮೂಲಕ, ಜೀವ ತರುವ ಕೆಲಸ ಮಾಡಿದ್ದೇವೆ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಈ ಪ್ರದೇಶವನ್ನು ನೀರಾವರಿ ಮಾಡುವುದರ ಮೂಲಕ ನಿಮ್ಮ ಭೂಮಿಯ ಬೆಲೆಯನ್ನು ಹೆಚ್ಚಿಸಿದ್ದೇನೆ. ನಿಮ್ಮ ಮುಂದಿನ ತಲೆಮಾರುಗಳ ಅಭಿವೃದ್ಧಿಗೆ ಇಂದೇ ನಾಂದಿ ಹಾಡಿದ್ದೇನೆ. ಉಳಿದವರ ಹಾಗೆ ಭರವಸೆ ನೀಡುವುದಿಲ್ಲ. ಕಾರ್ಯ ಸಾಧನೆ ಮಾಡಿ ತೋರಿಸಿದ್ದೇನೆ. ನಾನು ನಿಮ್ಮ ಎಂ.ಬಿ.ಪಾಟೀಲ. ನಾನು ಮಾಡಿದ ಕಾರ್ಯಕ್ಕೆ ನೀವೆಲ್ಲರೂ ಈ ಬಾರಿ ಹೆಚ್ಚಿನ ಬಹುಮತ ನೀಡಿರಿ’ ಎಂದು ಮನವಿ ಮಾಡಿದರು.

ಆದಿಲ್‌ಶಾಹಿ ಅರಸರ ಕಾಲದಲ್ಲಿ ಮಮದಾಪುರ ಕೆರೆಯ ಸುತ್ತಲೂ ಬೆಳೆಯುತ್ತಿದ್ದ ಕರಿ ಭತ್ತವನ್ನು (ಡುಗ್ಗ ತಳಿ) ಮಮದಾಪುರ ವಿರಕ್ತ ಮಠದ ಅಭಿನವ ಮುರುಘೇಂದ್ರ ಸ್ವಾಮೀಜಿಗೆ ವಿತರಿಸಿದ ಸಚಿವರು, 400 ವರ್ಷಗಳ ಹಿಂದಿನ ಈ ಭತ್ತದ ತಳಿಯನ್ನು ಪುನಃ ಇಲ್ಲಿ ಬೆಳೆಯುವ ಮೂಲಕ ಇತಿಹಾಸವನ್ನು ಮರು ಸೃಷ್ಟಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಮಮದಾಪುರ ಗ್ರಾಮಸ್ಥರು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ ದಂಪತಿ ಬೆಳ್ಳಿಯ ಅಶ್ವಾರೂಢ ಬಸವೇಶ್ವರರ ವಿಗ್ರಹವನ್ನು ನೀಡಿ ಸಚಿವರನ್ನು ಸನ್ಮಾನಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ 12ನೇ ಶತಮಾನದ ವಿವಿಧ ಶರಣರ ವೇಷಧಾರಿಗಳಾಗಿದ್ದ ತಮ್ಮ ಆಕ್ಸಫರ್ಡ್‌ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಬೆಳ್ಳಿ ತಟ್ಟೆಯಲ್ಲಿ ವಚನದ ಕಟ್ಟುಗಳನ್ನಿಟ್ಟು ಸಚಿವರನ್ನು ಸನ್ಮಾನಿಸಿದರು.

ಬಿದರಿಯ ಶಿವಲಿಂಗ ಸ್ವಾಮೀಜಿ, ಅಥಣಿಯ ಚನ್ನಬಸವ ಸ್ವಾಮೀಜಿ, ಬಾಗೇವಾಡಿಯ ಸಿದ್ಧಲಿಂಗ ಸ್ವಾಮೀಜಿ, ಷಣ್ಮುಖಾರೂಢ ಮಠದ ಅಭಿನವ ಷಣ್ಮುಖಾರೂಢರು, ಬೀಳಗಿ, ಚಿಕ್ಕಲಕಿ, ಗುಣದಾಳ ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಮದಾಪುರ ಕೆರೆಯ ಸುತ್ತಲಿನ ವಿವಿಧ ಗ್ರಾಮಗಳ 10 ಸಾವಿರ ಮಹಿಳೆಯರು ಕಳಶ ಹೊತ್ತು, ಕೆರೆಗೆ ಆಗಮಿಸಿ ಬಾಗಿನ ಅರ್ಪಿಸಿ, ಗಂಗಾಪೂಜೆ ಸಲ್ಲಿಸಿದರು.

ಮಧ್ವರಾಜ ಕುಲಕರ್ಣಿ, ಜಿ.ಕೆ.ಗೋಟ್ಯಾಳ, ರಿಯಾಜ್ ಬಾಗವಾನ, ರವಿಗೌಡ ಪಾಟೀಲ, ರವಿಗೌಡ ಧೂಳಖೇಡ, ಹಾಸಿಂಪೀರ ವಾಲೀಕಾರ, ಕೆರೆಗೆ ನೀರು ತುಂಬಿಸುವ ಯೋಜನೆಗೆ ಲಿಂಗದಳ್ಳಿ ಜಾಕವೆಲ್‌ನಲ್ಲಿ ಭೂಮಿಯನ್ನು ಬಿಟ್ಟುಕೊಟ್ಟ ಗಡದಾನ, ಜಾಲಗೇರಿ, ಲಿಂಗದಳ್ಳಿ ಕುಟುಂಬದವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

* * 

ಆದಿಲ್‌ಶಾಹಿ ಅರಸರ ಐತಿಹಾಸಿಕ ಮಮದಾಪುರ ಕೆರೆಗೆ ಬಾಗಿನ ಅರ್ಪಿಸಿರುವುದು ನನ್ನ ಜೀವನದ ಸಂತಸದ ಕ್ಷಣಗಳಲ್ಲಿ ಒಂದು
ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.