ADVERTISEMENT

ಗೂಂಡಾ ವರ್ತನೆಗೆ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 7:23 IST
Last Updated 1 ಫೆಬ್ರುವರಿ 2018, 7:23 IST
ಸಿಂದಗಿ ಪುರಸಭೆ ಸಭಾ ಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಂಬತ್ತನೆಯ ವಾರ್ಡ್ ನಿವಾಸಿಗಳಾದ ಹಾಸೀಂ ಆಳಂದ, ಮೆಹಿಬೂಬ್ ಆಳಂದ ಏಕಾಏಕಿ ಒಳಗೆ ನುಗ್ಗಿ ಸದಸ್ಯ ಹಣಮಂತ ಸುಣಗಾರ ಜೊತೆ ಜಗಳಕ್ಕಿಳಿದರು
ಸಿಂದಗಿ ಪುರಸಭೆ ಸಭಾ ಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಒಂಬತ್ತನೆಯ ವಾರ್ಡ್ ನಿವಾಸಿಗಳಾದ ಹಾಸೀಂ ಆಳಂದ, ಮೆಹಿಬೂಬ್ ಆಳಂದ ಏಕಾಏಕಿ ಒಳಗೆ ನುಗ್ಗಿ ಸದಸ್ಯ ಹಣಮಂತ ಸುಣಗಾರ ಜೊತೆ ಜಗಳಕ್ಕಿಳಿದರು   

ಸಿಂದಗಿ: ಸಾಮಾನ್ಯ ಸಭೆಯಲ್ಲಿ ಇಬ್ಬರು ವ್ಯಕ್ತಿಗಳು ನುಗ್ಗಿ ದಾಂಧಲೆ ನಡೆಸಿದ ಘಟನೆ ಒಂದೆಡೆ, ನಾನೊಬ್ಬ ಖಾಸಗಿ ವಾಹಿನಿ ವರದಿಗಾರ ಎಂದು ಮುಖ್ಯಾಧಿಕಾರಿ ಜೊತೆ ಸಾಮಾನ್ಯ ವ್ಯಕ್ತಿಯಂತೆ ಅಸಭ್ಯವಾಗಿ ವರ್ತಿಸಿದ್ದು ಇನ್ನೊಂದೆಡೆ, ಮಾಹಿತಿ ಹಕ್ಕು ಕಾರ್ಯಕರ್ತ ಎಂದು ಹೇಳಿಕೊಂಡು ಗದ್ದಲ ಮಾಡಿದ್ದು ಮತ್ತೊಂದೆಡೆ.

ಪುರಸಭೆ ಸಭಾ ಭವನದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ಅಹಿತಕರ ಘಟನೆಗಳ ಸರಮಾಲೆ ಇದು. ನಗರದ 9ನೆಯ ವಾರ್ಡ್ ನಿವಾಸಿಗಳಾದ ಹಾಸೀಂ ಆಳಂದ, ಮೆಹಿಬೂಬ ಆಳಂದ ಇಬ್ಬರು ಏಕಾಏಕಿ ಸಭೆಯ ಸಭಾ ಭವನದ ಬಾಗಿಲು ತೆರೆದು ಒಳ ನುಗ್ಗಿ ನಮ್ಮ ವಾರ್ಡ್‌ಗೆ ಯಾವ ಸೌಲಭ್ಯಗಳನ್ನು ಒದಗಿಸಿ ಕೊಟ್ಟದ್ದೀರಿ ಎಂದು ಜೋರು ಧ್ವನಿಯಲ್ಲಿ ಕೂಗಾಡಿದರು.

ಹಿರಿಯ ಸದಸ್ಯ ಹಣಮಂತ ಸುಣಗಾರ ‘ಇದು ಸದಸ್ಯರ ಸಾಮಾನ್ಯ ಸಭೆ. ಇದು ನಗರದ ಅಭಿವೃದ್ಧಿಗಾಗಿ ಚರ್ಚಿ ಸಲು ಸೇರಿರುವುದು. ಇಲ್ಲಿ ಸದಸ್ಯರಿಗೆ ಮಾತ್ರ ಪ್ರವೇಶವಿದೆ. ಸಭೆಯ ನಂತರ ನಿಮ್ಮ ಸಮಸ್ಯೆ ಬಗ್ಗೆ ಚರ್ಚಿಸೋಣ’ ಎಂದಿದ್ದಕ್ಕೆ ಆಕ್ರೋಶದಿಂದ ‘ನೀ ಯಾರು ನಮಗ ಕೇಳೋನು’ ಎಂದು ಏಕವಚನ ಪದ ಬಳಕೆಯಾದಾಗ ಸದಸ್ಯ ಸುಣಗಾರ ಸಿಟ್ಟಿನಿಂದ ಈ ಗೂಂಡಾಗಿರಿ ಸರಿಯಲ್ಲ, ಸಭೆಗೆ ಅಗೌರವ ತೋರಿಸಬಾರದು ಎಂದರೂ ಗಮನಕ್ಕೆ ತಾರದ ಇಬ್ಬರು ವ್ಯಕ್ತಿಗಳು ಇನ್ನಷ್ಟು ದಾಂಧಲೆ ಹೆಚ್ಚಿಸಿದರು.

ADVERTISEMENT

ಆಗ ಸುಣಗಾರ ‘ನೀವೇನು ಜೋರು ಮಾಡೋದು ಪುರಸಭೆ ಜಾಗೆಯಲ್ಲಿ ಅಕ್ರಮವಾಗಿ ಅಂಗಡಿ ಕಟ್ಟಿಕೊಂಡೋರು’ ಎಂದು ತರಾಟೆಗೆ ತೆಗೆದುಕೊಂಡರು. ಇದೇ ರೀತಿ ಖಾಸಗಿ ವಾಹಿನಿ ವರದಿಗಾರ ಎಂದು ಹೇಳಿಕೊಂಡು ಸಭೆಯಲ್ಲಿ ಸಂಬಂಧಿಸದ ವಿಷಯ ಮುಂದಿಟ್ಟುಕೊಂಡು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದಾಗ ಹಿರಿಯ ಸದಸ್ಯ ರಾಜಶೇಖರ ಕೂಚಬಾಳ ‘ಪ್ರೆಸ್ ಅಂತಾ ಹೇಳಿ ಒಳಗೆ ನುಗ್ಗಿ ಈ ರೀತಿ ನೀ ಏನು ಕೇಳ್ತೀಯಾ...? ಪುರಸಭೆ ಕಾರ್ಯಾಲಯದಲ್ಲಿ ಪ್ರೆಸ್ ಹೆಸರು ಹೇಳಿಕೊಂಡು ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ದಿನನಿತ್ಯ ನಡೆಯುತ್ತಿದೆ. ಇದು ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಶಿಸ್ತುಬದ್ಧವಾಗಿ ಸಭೆ ನಡೆಸಲು ಬಾರದಿದ್ದರೆ ಅಧ್ಯಕ್ಷ ಸ್ಥಾನದಲ್ಲಿ ಯಾಕಿರಬೇಕು...? ಇದಕ್ಕೆ ನೀವು ನಾಲಾಯಕ್ ಎಂದು ಅಧ್ಯಕ್ಷ ಬಾಷಾಸಾಬ್ ತಾಂಬೋಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಏತನ್ಮಧ್ಯೆ ಪೌರ ಮಹಿಳಾ ಕಾರ್ಮಿಕರು ನಮಗ ಆರು ತಿಂಗಳಿಂದ ಸಂಬಳವಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳಲು ಸಭೆಯೊಳಗೆ ಧಾವಿಸಿದರು. ಈ ಸಂದರ್ಭದಲ್ಲಿ ಪೌರ ಕಾರ್ಮಿಕ ಸಂಘಟನೆ ಉಪಾಧ್ಯಕ್ಷೆ ಶಿವಕಾಂತಮ್ಮ ಡೋಣೂರ ‘ಊರ ಸ್ವಚ್ಛ ಮಾಡುವ ನಮಗ ಆರು ತಿಂಗಳಿಂದ ಪಗಾರ ಇಲ್ಲ ಅಂದ್ರೆ ನಮ್ಮ ಬದುಕು ನಿರ್ವಹಣೆ ಹೇಗೆ...? ಎಂದು ಪ್ರಶ್ನಿಸಿದರು.

‘ನಿಮಗೆ ಒಂದು ತಿಂಗಳ ಪಗಾರ ಬರದಿದ್ದರೆ ಎಷ್ಟು ಚಡಪಡಸ್ತೀರಿ’? ಎಂದು ಸೀತಾಬಾಯಿ ಸುಲ್ಪಿ ಮುಖ್ಯಾಧಿಕಾರಿಗೆ ಪ್ರಶ್ನೆ ಮಾಡಿದರು. ಆಗ ಸದಸ್ಯ ಕೂಚಬಾಳ ನಮ್ಮ ಸದಸ್ಯರಿಗೆ ನೀಡುವ ಗೌರವಧನ ನಮಗೆ ಕೊಡಬೇಡಿ ಅದನ್ನು ಪೌರ ಕಾರ್ಮಿಕರಿಗೆ ನೀಡಿ ಎಂದಾಗ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಪುರಸಭೆ ಲೆಕ್ಕಪತ್ರ, ಜಮಾ–ಖರ್ಚು ಬಹಿರಂಗಪಡಿಸಲು ಸದಸ್ಯರಾದ ದಯಾನಂದ ಪತ್ತಾರ, ರಾಜಶೇಖರ ಕೂಚಬಾಳ ಪಟ್ಟುಹಿಡಿದರು. ಅದನ್ನು ಮುಂದಿನ ಸಭೆಯಲ್ಲಿ ಒಪ್ಪಿಸಲಾಗುವುದು ಎಂದು ಅಧ್ಯಕ್ಷ ತಾಂಬೋಳಿ, ಮುಖ್ಯಾಧಿಕಾರಿ ರಮೇಶ ಇಮ್ಮನದ ಪ್ರತಿಕ್ರಿಯಿಸಿದರು. ಸಭೆಯ ವಿಷಯಗಳು ಬಹುತೇಕ ಈ ಮೊದಲು ಚರ್ಚಿತವಾಗಿದ್ದು ಎಂದು ಸದಸ್ಯರು ನಿರ್ಲಕ್ಷ್ಯ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಬಾಷಾಸಾಬ ತಾಂಬೋಳಿ ವಹಿಸಿದ್ದರು. ಉಪಾಧ್ಯಕ್ಷೆ ಮಹಾದೇವಿ ಬಿರಾದಾರ ಇದ್ದರು.

* * 

ಸದಸ್ಯರಿಗೆ ಮಾತ್ರ ಪ್ರವೇಶ ಇರುವ ಸಭೆಯಲ್ಲಿ ಅಕ್ರಮವಾಗಿ ಇಬ್ಬರು ಒಳಗೆ ನುಗ್ಗಿ ಗೂಂಡಾ ವರ್ತನೆ ಪ್ರದರ್ಶಿಸಿ ಅಶ್ಲೀಲ ಪದ ಬಳಕೆ ಮಾಡಿರುವುದು ಖಂಡನೀಯ
ಹಣಮಂತ ಸುಣಗಾರ ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.