ADVERTISEMENT

ಕಷ್ಟಬೇಡ, ಇಷ್ಟಪಟ್ಟು ಓದಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 5:16 IST
Last Updated 3 ಫೆಬ್ರುವರಿ 2018, 5:16 IST

ಸಿಂದಗಿ: ‘ಶಿಕ್ಷಣ ಅತ್ಯಂತ ಶಕ್ತಿಶಾಲಿ ಸಾಧನ. ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ಅಂದಾಗಲೇ ವ್ಯಕ್ತಿತ್ವ ವಿಕಸನ ಸಾಧ್ಯ’ ಎಂದು ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಎಸ್.ಪಾಟೀಲ ಸಲಹೆ ನೀಡಿದರು.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಹಮ್ಮಿಕೊಂಡ ಭೀಮೋತ್ಸವ ಸಾಂಸ್ಕೃತಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ಇಂಗ್ಲಿಷ್‌ ಭಾಷೆ ಪ್ರಸ್ತುತ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಆದರೆ ಪಾಲಕರು ತಮ್ಮ ಮಕ್ಕಳ ಬಾಲ್ಯಾವಸ್ಥೆ, ಪ್ರೌಢಾವಸ್ಥೆಯನ್ನು ಕಸಿದುಕೊಂಡು ಅವರ ಮೇಲೆ ಒತ್ತಡ ಹೇರುವ ಮೂಲಕ ಒತ್ತಾಯದ ಶಿಕ್ಷಣ ತುರುಕಲು ಹೋಗಬೇಡಿ. ವೃಥಾ ತಮ್ಮ ಮಕ್ಕಳನ್ನು ಸ್ಪರ್ಧೆಗೆ ನೂಕುವುದು ಸರಿಯಲ್ಲ. ಸಾಧುವೂ ಅಲ್ಲ’ ಎಂದು ಪಾಲಕರಲ್ಲಿ ಮನವಿ ಮಾಡಿಕೊಂಡರು.

ADVERTISEMENT

‘ಪ್ರತಿಯೊಬ್ಬ ಶಿಕ್ಷಕ ತನ್ನ ವೃತ್ತಿಯನ್ನು ಪ್ರೀತಿಸುವ ಮೂಲಕ ಸಂತೃಪ್ತಿಯಿಂದ ಸೇವೆ ಸಲ್ಲಿಸಿ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಅತ್ಯುತ್ತಮ ಶಿಲ್ಪಿಗಳಾಗಿ ಹೊರ ಹೊಮ್ಮಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಮಾತನಾಡಿ ‘ಮಕ್ಕಳೇ ನಿಜವಾದ ಸಂಪತ್ತು. ಮಾನವ ಲೋಕದ ಸುಂದರ ಪುಷ್ಪಗಳು. ಇಂಥ ಮಕ್ಕಳ ಅಂತರಾಳದಲ್ಲಿ ಶೀಲ, ಸಚ್ಚಾರಿತ್ರ್ಯದಂತ ಸಂಸ್ಕಾರದ ಬೀಜ ಬಿತ್ತುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಲೇಬೇಕಾದ ಮಹತ್ವದ ಕಾರ್ಯ’ ಎಂದು ಮಾತನಾಡಿದರು.

‘ನಮ್ಮ ಭೀಮಾ ಶಿಕ್ಷಣ ಸಂಸ್ಥೆ ಒಂದು ಕುಟುಂಬದಂತಿದೆ. ದಕ್ಷಿಣ ಭಾಗದಲ್ಲಿಯೇ ಅತ್ಯುತ್ತಮ ಮಾದರಿ ಶಿಕ್ಷಣ ಸಂಸ್ಥೆ ಎಂದು ಪ್ರಶಸ್ತಿ ಪಡೆದಿದೆ ಎಂಬುದನ್ನು ತಿಳಿಸಲು ಹೆಮ್ಮೆ ಎನಿಸುತ್ತಿದೆ’ ಎಂದು ಭೀಮಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಠ್ಠಲ ಕೊಳ್ಳುರ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಆರ್.ಎಲ್.ವಾಸುದೇವರಾಯ ಪತ್ರಿಕಾ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ರವಿಚಂದ್ರ ಮಲ್ಲೇದ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂದೀಪ ಬೆಳಗಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಿವು ಹತ್ತಿ, ನಿವೃತ್ತ ಉಪನ್ಯಾಸಕ ಶಾಂತೂ ಹಿರೇಮಠ, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಪಂಡಿತ ಯಂಪೂರೆ ಅವರನ್ನು ಗೌರವಿಸಲಾಯಿತು.

ಪ್ರಾಚಾರ್ಯ ಶಾಹಿಮೋಲ್ ಶಿಕ್ಷಣ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಟೆನಿರಾಬಿನ್ ಸ್ವಾಗತಿಸಿದರು. ಅಭಿಷೇಕ್ ಹಾಗೂ ಕ್ರಿಶಾನು ನಿರೂಪಿಸಿದರು. ರಾಯನ್ ವಂದಿಸಿದರು. ಶಾಲಾ ಮಕ್ಕಳಿಂದ 33 ವಿವಿಧ ಪ್ರಾಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.