ADVERTISEMENT

8921 ಪ್ರಕರಣ ಇತ್ಯರ್ಥ: ವೆಂಕಣ್ಣ

ಹೊಸ ಇತಿಹಾಸ ಬರೆದ ಇ-ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:41 IST
Last Updated 22 ಸೆಪ್ಟೆಂಬರ್ 2020, 15:41 IST
ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಮಾತನಾಡಿದರು
ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಮಾತನಾಡಿದರು   

ವಿಜಯಪುರ: ಜಿಲ್ಲೆಯಲ್ಲಿಸೆ.19 ರಂದು ಆಯೋಜನೆ ಮಾಡಲಾಗಿದ್ದ ಮೆಗಾ ಇ-ಲೋಕ ಅದಾಲತ್‌ನಲ್ಲಿ 8921 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದ 30 ಜಿಲ್ಲೆಗಳ ಇ-ಲೋಕ್ ಅದಾಲತ್ ಅಂಕಿ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡಾಗ ವಿಜಯಪುರ ಜಿಲ್ಲೆ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದವರ ಪೈಕಿ ಮೊದಲ 3ನೇ ಸ್ಥಾನದಲ್ಲಿದೆ ಎಂದರು.

ಇ-ಲೋಕ್ ಅದಾಲತ್‍ನಲ್ಲಿ ಜಿಲ್ಲೆಯ ಒಟ್ಟು 10,395 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 8921 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ADVERTISEMENT

ಇ-ಲೋಕ್ ಅದಾಲತ್‍ನಲ್ಲಿ ವಿಜಯಪುರ ಜಿಲ್ಲೆಯ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ರಾಜಿಗೆ ಒಳಪಡಬಹುದಾದ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು ವರ್ಗಾವಣೆಗಳ ಮೂಲಕ ಲಿಖಿತ ಕಾಯ್ದೆಯ ಪ್ರಕರಣಗಳು, ಮೋಟಾರ್‌ ವಾಹನ ಅಪಘಾತದಲ್ಲಿ ಪರಿಹಾರ ಕೋರಿರುವ ಪ್ರಕರಣಗಳು, ವಿಚ್ಛೇದನವನ್ನು ಹೊರತುಪಡಿಸಿ ಇರುವ ಕೌಟುಂಬಿಕ ವ್ಯಾಜ್ಯಗಳು, ಇಬ್ಬಾಗ ಕೋರಿರುವ ದಾವೆಗಳು ಹಾಗೂ ಇತರೆ ಸಿವಿಲ್ ವ್ಯಾಜ್ಯಗಳನ್ನು ಹೈಕೋರ್ಟ್‌ನ ಎಸ್.ಓ.ಪಿ. ಪ್ರಕಾರ ವಿಡಿಯೊ ಕಾನ್ಫರನ್ಸ್ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಇ-ಲೋಕ್ ಅದಾಲತ್‍ನಲ್ಲಿ ಇತ್ಯರ್ಥಗೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ ಎಂದರು.

ಇ-ಲೋಕ್ ಅದಾಲತ್ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲ ಕಕ್ಷಿದಾರರಿಗೂ, ವಕೀಲರಿಗೂ, ವಿಮಾ ಕಂಪನಿಯ ಅಧಿಕಾರಿಗಳಿಗೂ, ಕಾನೂನು ಅಧಿಕಾರಿ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಧನ್ಯವಾದ ಅರ್ಪಿಸಲಾಗುವುದು ಎಂದರು.

ಇ-ಲೋಕ್ ಅದಾಲತ್ ಬಗ್ಗೆ ಎಲ್ಲಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ ವಿಜಯಪುರ ಜಿಲ್ಲೆಯ ಎಲ್ಲ ಮಾಧ್ಯಮಗಳಿಗೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ, ಅಂಗನವಾಡಿಯ ಮೇಲ್ವಿಚಾರಿಕಿಯರು ಹಾಗೂ ಕಾರ್ಯಕರ್ತೆಯರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.