ADVERTISEMENT

ತ್ರಿವರ್ಣ ಆಲಂಕೃತ ಗುಮ್ಮಟ ವೀಕ್ಷಣೆಗೆ ಅವಕಾಶ

‘ಪ್ರಜಾವಾಣಿ’ ವರದಿಗೆ ಸ್ಪಂದನೆ; ಸಂಜೆ 7ರಿಂದ ರಾತ್ರಿ 9 ರ ವರೆಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 10:58 IST
Last Updated 14 ಆಗಸ್ಟ್ 2022, 10:58 IST

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಐತಿಹಾಸಿಕ ಸ್ಮಾರಕ ಗೋಳಗುಮ್ಮಟವನ್ನು ತ್ರಿವರ್ಣಗಳಿಂದ ಆಲಂಕರಿಸಲಾಗಿದ್ದು, ರಾತ್ರಿ ವೇಳೆ ಎರಡು ತಾಸುಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

ತ್ರಿವರ್ಣ ದೀಪಾಲಂಕಾರ ಮಾಡಿದ್ದರೂ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕ್ರಮವನ್ನು ಪ್ರಶ್ನಿಸಿ ‘ಪ್ರಜಾವಾಣಿ’ಯಲ್ಲಿ ಭಾನುವಾರ ವಿಶೇಷ ವರದಿ ಪ್ರಕಟಿಸಲಾಗಿತ್ತು.

ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಅವರು ತಕ್ಷಣವೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ತ್ರಿವರ್ಣ ಗೋಳಗುಮ್ಮಟ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ.

ADVERTISEMENT

ಗೋಳಗುಮ್ಮಟ ಆವರಣ ಸೂಕ್ಷ್ಮವಾದ ಪ್ರದೇಶ ಹಾಗೂ ಸ್ಮಾರಕವಾಗಿದೆ. ರಾತ್ರಿ ವೇಳೆ ವೀಕ್ಷಣೆಗೆ ಅವಕಾಶ ನೀಡಿದರೆ ಪ್ರವಾಸಿಗರಿಗೆ ಸಮಸ್ಯೆಗಳಾಗಬಹುದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು.

ಗೋಳಗುಮ್ಮಟ ಆವರಣದಲ್ಲಿ ರಾತ್ರಿ ವೇಳೆಅಗತ್ಯ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು. ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ರಾತ್ರಿ 9 ರ ವರೆಗೆ ಅವಕಾಶ:

ಸಂಜೆ 7ರಿಂದ 9ರ ವರಗೆ ವೀಕ್ಷಣೆಗೆ ಉಚಿತ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು, ಪ್ರವಾಸಿಗರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಎಎಸ್‌ಐನ ವಿಜಯಪುರ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ರಾಕೇಶ್‌ ಬಿ.ಎಸ್‌.ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.