ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ವೃತ್ತ, ಓಣಿ, ಕೇರಿ, ಸಾರ್ವಜನಿಕ ಸ್ಥಳ, ದೇವಾಲಯ, ಸಂಘ, ಸಂಸ್ಥೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗಳಿಗೆ ಏಳನೇ ದಿನವಾದ ಮಂಗಳವಾರ ಭಕ್ತಿಯಿಂದ ವಿದಾಯ ಹೇಳಲಾಯಿತು.
ಸಾರ್ವಜನಿಕ ಗಣೇಶ ಮಹಾಮಂಡಳಗಳು ಬೆಳಿಗ್ಗೆಯಿಂದಲೇ ಪೂಜೆ, ಹವನ, ಹೋಮ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಮಧ್ಯಾಹ್ನ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಯುವಕರು ಗಣಪತಿಯನ್ನು ತೆರೆದ ವಾಹನಗಳಲ್ಲಿ ಕೂರಿಸಿ, ಪಟಾಕಿ, ಡಿಜೆಗಳ ಅಬ್ಬರದ ನಡುವೆ ಅದ್ಧೂರಿ ಮೆರವಣಿಗೆ ನಡೆಸಿದರು.
ವಿಜಯಪುರದ ಜೋರಾಪುರ ಪೇಠದ ಶಂಕರಲಿಂಗ ದೇವಸ್ಥಾನದಲ್ಲಿ ಶ್ರೀ ಶಂಕರಲಿಂಗ ಗಜಾನನ ಮಂಡಳಿ ಪ್ರತಿಷ್ಠಾಪಿಸಿದ್ದ ಸಂಕಲ್ಪ ಸಿದ್ದಿ ಗಣಪತಿ ವಿಸರ್ಜನೆಗೂ ಮುನ್ನಾ ಅದ್ಧೂರಿ ಮೆರವಣಿಗೆ ಮಾಡಲಾಯಿತು. 200 ಯುವಕ, ಯುವತಿಯರು ಹಾಗೂ ಮಹಿಳೆಯರು ಲೇಜಿಂ ಹಾಗೂ ವಾರಕರಿ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಸಂಜೆ ಆರಂಭವಾದ ಗಣೇಶನ ಮೂರ್ತಿ ವಿಸರ್ಜನಾ ಮೆರವಣಿಗೆ ತಡರಾತ್ರಿ ವರೆಗೂ ನಡೆಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಗಣೇಶ ವಿಸರ್ಜನೆ ನಿಮಿತ್ತ ನಗರದ ಬಹುತೇಕ ಶಾಲಾ, ಕಾಲೇಜುಗಳು ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು. ಮದ್ಯ ಮಾರಾಟ ನಿರ್ಬಂಧಿಸಲಾಗಿತ್ತು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.