ADVERTISEMENT

ವಿಜಯಪುರ: ಗಣೇಶಗೆ ಭಕ್ತರಿಂದ ಅದ್ಧೂರಿ ವಿದಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 15:40 IST
Last Updated 6 ಸೆಪ್ಟೆಂಬರ್ 2022, 15:40 IST
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮ –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮ –ಪ್ರಜಾವಾಣಿ ಚಿತ್ರ   

ವಿಜಯಪುರ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವ ಮೂರ್ತಿಗಳನ್ನು ಏಳನೇ ದಿನವಾದ ಮಂಗಳವಾರ ಅದ್ಧೂರಿ ಮೆರವಣಿಗೆ ಮೂಲಕ ಕೊಂಡೊಯ್ದು, ವಿಸರ್ಜನೆ ಮಾಡಲಾಯಿತು.

ನಗರದ ವಿವಿಧ ಬಡಾವಣೆ, ಕಾಲೊನಿ, ಓಣಿಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪನ ಮೂರ್ತಿಗಳನ್ನು ಸಾರ್ವಜನಿಕರುಬಾಜಾ ಭಜಂತ್ರಿ, ಡಿಜೆ ಸಂಗೀತ, ನೃತ್ಯ ವೈವಿಧ್ಯದೊಂದಿಗೆ ಸಿದ್ದೇಶ್ವರ ಗುಡಿ, ಗಾಂಧಿಚೌಕಿ, ಶಿವಾಜಿ ವೃತ್ತದ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ದು ತಾಜ್‌ಬಾವಡಿ ಆವರಣದಲ್ಲಿ ನಿರ್ಮಿಸಿರುವ ಕೃತಕ ಹೊಂಡದಲ್ಲಿ ವಿಸರ್ಜಿಸುವ ಮೂಲಕ ಗಣಪನಿಗೆ ಭಕ್ತಿಪೂರ್ವಕ ವಿದಾಯ ಹೇಳಿದರು.

ಕೆಂಪು, ಬಿಳಿ ಸಾಂಪ್ರದಾಯಿಕ ಸಮವಸ್ತ್ರಧಾರಿ ಬಾಲಕ, ಬಾಲಕಿಯರನ್ನೊಳಗೊಂಡ ತಂಡದ ಆಕರ್ಷಕ ಲೆಜಿಂ ಪ್ರದರ್ಶನ,ಪಟಾಕಿ ಸಿಡಿತ ನೋಡುಗರ ಮನ ಸೆಳೆಯಿತು. ಮಳೆಯನ್ನು ಲೆಕ್ಕಿಸದೇ ಯುವಕರು ಡಿಜೆ ಅಬ್ಬರಕ್ಕೆ ಮೈಮರೆತು ನರ್ತಿಸಿದರು.

ADVERTISEMENT

ಸಿದ್ದೇಶ್ವರ ಗುಡಿ ಎದುರಿನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಸ್ವಾಮಿ ವಿವೇಕಾನಂದ ಸೇನೆ ವತಿಯಿಂದ ಸನ್ಮಾನಿಸಲಾಯಿತು.

ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘು ಅಣ್ಣಿಗೇರಿ, ವಿಕ್ರಂ ಗಾಯಕವಾಡ, ಚಂದ್ರು ಚೌಧರಿ, ಶಿವಾನಂದ ನೀಲಾ ಮತ್ತಿತರರು ಪಾಲ್ಗೊಂಡಿದ್ದರು.

ಗಣೇಶನ ವಿಸರ್ಜನಾ ಮೆರವಣಿಗೆ ತಡರಾತ್ರಿ ವರೆಗೆ ನಡೆಯಿತು.ಮೆರವಣಿಗೆ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರಿಂದ ವಾಹನ ಸವಾರರು ಹೈರಣಾದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.