ADVERTISEMENT

‘ಕೌಶಲ–ಜ್ಞಾನದಿಂದ ರೂಪುಗೊಳ್ಳುವ ಜೀವನ’: ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:16 IST
Last Updated 11 ಜುಲೈ 2025, 6:16 IST
ಸಿಂದಗಿ ಪಟ್ಟಣದ ಪದ್ಮರಾಜ ಬಿ.ಇಡಿ ಕಾಲೇಜು ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆ.ಎಚ್.ಸೋಮಾಪುರ ಅವರ ಬಿಚ್ಚುಗತ್ತಿ ಗ್ರಂಥವನ್ನು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಬಿಡುಗಡೆಗೊಳಿಸಿದರು
ಸಿಂದಗಿ ಪಟ್ಟಣದ ಪದ್ಮರಾಜ ಬಿ.ಇಡಿ ಕಾಲೇಜು ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆ.ಎಚ್.ಸೋಮಾಪುರ ಅವರ ಬಿಚ್ಚುಗತ್ತಿ ಗ್ರಂಥವನ್ನು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಬಿಡುಗಡೆಗೊಳಿಸಿದರು   

ಸಿಂದಗಿ: ‘ಕೌಶಲ, ಶಕ್ತಿ, ಜ್ಞಾನ, ಪಾಂಡಿತ್ಯದಿಂದ ಯುವಕರ ಜೀವನ ರೂಪುಗೊಳ್ಳುತ್ತದೆ. ಇವು ಸ್ವಯಾರ್ಜಿತ ಆಸ್ತಿ. ಇವು ಪದವಿಪ್ರಮಾಣಪತ್ರಗಳಿಂದ ಸಿಗುವುದಿಲ್ಲ. ಯುವಕರು ಕೇವಲ ಪ್ರಮಾಣಪತ್ರದ ಹಿಂದೆ ಬಿದ್ದಿದ್ದಾರೆ. ಪರೀಕ್ಷೆಯಲ್ಲಿ ಕಾಪಿ ಹೊಡೆಯುವುದು ಸಾಮಾನ್ಯವಾಗಿದೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಪದ್ಮರಾಜ ಬಿ.ಇಡಿ ಕಾಲೇಜು ಸಭಾಭವನದಲ್ಲಿ ಮಂಗಳವಾರ ಆರ್.ಡಿ.ಪಾಟೀಲ ಪಿಯು ಕಾಲೇಜು, ಮಾತೋಶ್ರೀ ಗುರುಬಸಮ್ಮ ಹಣಮಂತ್ರಾಯ ಸೋಮಾಪುರ ಸೇವಾ ಸಂಸ್ಥೆ, ಲಾಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಕರು ಭಾಷಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಜ್ಞಾನ, ಶಕ್ತಿ ನಿಮ್ಮನ್ನು ಕಾಪಾಡುತ್ತದೆ. ಯುವ ಪೀಳಿಗೆ ಪ್ರಕೃತಿ ಪ್ರಿಯತೆ, ಶಾಂತಿ, ಸಮಾಧಾನ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆ ತಂದೆ-ತಾಯಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಯುವಕರಿಗೆ ಸಲಹೆ ನೀಡಿದರು.

ADVERTISEMENT

ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, ‘40 ವರ್ಷಗಳಿಂದ ಪ್ರತಿ ಗುರುವಾರಕ್ಕೊಮ್ಮೆ ಮೌನವಾಗಿರುವುದು ತಪಸ್ಸೇ ಸರಿ. ಇದರಿಂದ ಆತ್ಮದ ಅರಿವು ವೃದ್ಧಿಸುತ್ತದೆ’ ಎಂದು ತಿಳಿಸಿದರು.

ಲೇಖಕ ಕೆ.ಎಚ್.ಸೋಮಾಪುರ ವಿರಚಿತ ಬಿಚ್ಚುಗತ್ತಿ ಗ್ರಂಥವನ್ನು ಕುಲಪತಿಗಳು ಬಿಡುಗಡೆಗೊಳಿಸಿದರು. ಕುಲಪತಿಗಳನ್ನು ಸನ್ಮಾನಿಸಲಾಯಿತು,

ಶರಣ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸಾಹಿತಿ ಸಂಗಮನಾಥ ಲೋಕಾಪುರ ಗ್ರಂಥಾವಲೋಕನ ಮಾಡಿ, ‘ಅಭ್ಯಾಸ ಬಲದಿಂದ, ಪ್ರತಿಭೆಯಿಂದ ಕಾವ್ಯ ಹುಟ್ಟುತ್ತದೆ. ಕಾವ್ಯ ತಿರುಚುವ ವಸ್ತು ಅಲ್ಲ, ತಿಳಿಸಿದರೆ ತಿಳಿಯುವುದಿಲ್ಲ. ತಿಳಿದ ಮೇಲೆ ಉಳಿಯುವದಿಲ್ಲ’ ಎಂದರು.

ಭಾಮಿನಿ ಷಟ್ಪದಿಯಲ್ಲಿ ಕಾವ್ಯ ರಚನೆ ಮಾಡುವುದರಲ್ಲಿ ಉತ್ತರಕರ್ನಾಟಕ ಭಾಗದಲ್ಲಿ ಸಿಂದಗಿ ಪಟ್ಟಣದ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿದ್ದ ಎಂ.ವಿ.ಗಣಾಚಾರಿ ಎತ್ತಿದ ಕೈ. ಇವರ ಷಟ್ಪದಿ ಪ್ರಭಾವ ಸೋಮಪುರ ಅವರ ಕಾವ್ಯದಲ್ಲಿ ಎದ್ದು ಕಾಣುತ್ತದೆ. ಲೇಖಕ ಸೋಮಪುರ ತಮ್ಮ ಭಾವನೆಗಳಿಗೆ ಅಕ್ಷರರೂಪ ಕೊಟ್ಟಿದ್ದಾರೆ. ಇಂದಿನ ವ್ಯವಸ್ಥೆಯ ಬಗ್ಗೆ ಬಿಚ್ಚುಗತ್ತಿ ಕಾವ್ಯ ಮೊನಚಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾರಂಗಮಠದ ಉತ್ತರಾಧಿಕಾರಿ ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿ.ಇ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಪಿ.ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು.

ಲೇಖಕ ಕೆ.ಎಚ್.ಸೋಮಾಪುರ, ಎಸ್.ವೈ.ಬೀಳಗಿ, ರವಿ ಗೋಲಾ, ಬಿ.ಎಂ.ಸಿಂಗನಳ್ಳಿ, ಶರಣು ಜೋಗೂರ, ಪೂಜಾ ಹಿರೇಮಠ ಮಾತನಾಡಿದರು.
ತಾಳಿಕೋಟೆ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಪಾಟೀಲ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪದ್ಮರಾಜ ಬಿ.ಇಡಿ ಕಾಲೇಜು ಪ್ರಾಚಾರ್ಯೆ ಜಗದೇವಿ ನಂದಿಕೋಲ, ಲಾಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಪಾಟೀಲ ಇದ್ದರು.

ಪುಸ್ತಕ ಪರಿಚಯ:

ಹೆಸರು-ಬಿಚ್ಚುಗತ್ತಿ ಕಾವ್ಯ ಸಂಕಲನ

ಲೇಖಕ-ಕೆ.ಎಚ್. ಸೋಮಾಪುರ

ಪುಟಗಳು-118 ಬೆಲೆ-150

ಪ್ರಕಾಶನ-ಮಾತೋಶ್ರೀ ಗುರುಬಸಮ್ಮ ಹಣಮಂತ್ರಾಯ ಸೋಮಾಪುರ ಪ್ರಕಾಶನ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.